×
Ad

ಯಾದಗಿರಿ | ‘ವಿಬಿ-ಜಿ ರಾಮ್ ಜಿ’ ಹೆಸರು ಕೈ ಬಿಡಲು ಆಗ್ರಹ

‘ಮನರೇಗಾ ಉಳಿಸಿ’ ಆಂದೋಲನ, ಉಪವಾಸ ಸತ್ಯಾಗ್ರಹ

Update: 2026-01-24 23:43 IST

ಯಾದಗಿರಿ, ಜ.24: ‘ಮನರೇಗಾ ಉಳಿಸಿ’ ಆಂದೋಲನದ ಅಂಗವಾಗಿ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಆಂದೋಲನವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ, ಗ್ರಾಮೀಣ ಅಭಿವೃದ್ಧಿಯ ಗುರಿಯೊಂದಿಗೆ ಯುಪಿಎ ಸರಕಾರ ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮಗಳಿಗೆ ಅಗತ್ಯವಾದ ಕಾಮಗಾರಿಗಳನ್ನು ಆಯಾ ಗ್ರಾಮಗಳೇ ನಿರ್ಧರಿಸುವಂತಹ ಅಧಿಕಾರವೂ ನೀಡಲಾಗಿತ್ತು. ಆದರೆ ಎನ್‌ಡಿಎ ಸರಕಾರ ಮನರೇಗಾ ಯೋಜನೆಯ ಮೂಲ ಉದ್ದೇಶಗಳನ್ನು ಕೈಬಿಟ್ಟು, ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ದೆಹಲಿಯಲ್ಲಿ ಕುಳಿತವರು ನಿರ್ಧರಿಸುವಂತಾಗಿದೆ. ಇದರಿಂದ ಗ್ರಾಮಗಳ ಅಗತ್ಯಗಳು ಹಾಗೂ ಆದ್ಯತೆಗಳಿಗೆ ಯಾವುದೇ ಅವಕಾಶ ಉಳಿದಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಮನರೇಗಾ ಯೋಜನೆಯಡಿ ಕೇಂದ್ರ ಸರಕಾರ ಶೇ.90ರಷ್ಟು ಅನುದಾನ ನೀಡುತ್ತಿತ್ತು. ಆದರೆ ಈಗ ಶೇ. 60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನುದಾನ ನೀಡಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯ ಸರಕಾರಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಅವರು ಕಿಡಿಕಾರಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೆಗಾರ ಮಾತನಾಡಿ, ಯುಪಿಎ ಸರಕಾರದ ಮಹತ್ವದ ಯೋಜನೆಯಾದ ಮನರೇಗಾ ಯೋಜನೆಯ ಹೆಸರನ್ನೇ ಬದಲಿಸಿ ಎನ್‌ಡಿಎ ಸರಕಾರ ಘೋರ ಅನ್ಯಾಯ ಮಾಡಿದೆ. ಇದು ದುಡಿದು ಬದುಕುವ ಕೋಟ್ಯಂತರ ಕಾರ್ಮಿಕರ ಪಾಲಿನ ಮಹತ್ವದಯೋಜನೆಯಾಗಿದೆ. ಇದನ್ನು ತಲೆಕೆಳಗಾಗಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.

ಎನ್‌ಡಿಎ ಭಾಗವಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗಳೇ ಮೈತ್ರಿಕೂಟದ ಒಳಜಗಳವನ್ನು ಬಹಿರಂಗಪಡಿಸುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ, ರಾಘವೇಂದ್ರ ಮಾನಸಗಲ್, ಮಲ್ಲಿಕಾರ್ಜುನ ಈಟೇ, ಲಕ್ಷ್ಮಣ ರಾಠೋಡ್, ಭೀಮರಾಯ ಠಾಣಾಗುಂದಿ, ಸಾಯಿಬಣ್ಣಾ ಬೊರಬೊಂಡಾ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಮ್ಮ ಕೊರೂರು, ನೀಲಕಂಠ ಬಡಿಗೇರ, ಅಲಂ ಪಟೇಲ್, ಬಸವರಾಜ ದಳಪತಿ, ಚನ್ನಕೇಶವ ಬಾಣತಿಹಾಳ, ಆಶಪ್ಪ ಮಾಸ್ಟರ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಸರಿನ ಬದಲಾವಣೆ ಕೂಡಲೇ ವಾಪಸ್ ಪಡೆಯಬೇಕು

ಸ್ವಾತಂತ್ರ್ಯಾ ನಂತರ ಸಾವಿರಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಸರಕಾರ, ರೈತರು, ಬಡವರು ಹಾಗೂ ದಿನದಲಿತರ ಅಭಿವೃದ್ಧಿಗೆ ಸದಾ ಶ್ರಮಿಸಿದೆ. ಆದರೆ ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮನರೇಗಾ ಯೋಜನೆಯ ಹೆಸರಿನ ಬದಲಾವಣೆ ಕೂಡಲೇ ವಾಪಸ್ ಪಡೆಯಬೇಕು.

-ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶಾಸಕರು

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರವೇ ಕಾರಣ

ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಆಡಳಿತದಲ್ಲಿ ದೇಶ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ಯುಪಿಎ ಸರಕಾರ ಜಾರಿಗೆ ತಂದ ಜನಪರ ಯೋಜನೆಗಳಿಗೆ ಕತ್ತರಿ ಹಾಕುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು.

-ಬಾಬುರಾವ ಚಿಂಚನಸೂರು ಅಧ್ಯಕ್ಷರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News