ಯಾದಗಿರಿ: ಮೊಬೈಲ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೆ ಸಮಸ್ತ ಹಾಗೂ ಇತರ ಆ್ಯಪ್‌ಗಳಲ್ಲಿ ಆನ್‌ಲೈನ್ ಕೆಲಸ ಮಾಡುವಂತೆ ಆಶಾ ಕಾರ್ಯಕರ್ತೆಯರನ್ನು ಒತ್ತಾಯಿಸುವುದನ್ನು ನಿಲ್ಲಿಸಬೇಕು. ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೂರಾರು ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಯಾದಗಿರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ, ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯನ್ನು ಒತ್ತಾಯಿಸಲಾಯಿತು.

ಇಲಾಖೆಯ ಆದೇಶದಂತೆ ಪ್ರತಿ ತಿಂಗಳು ₹5,000 ಗೌರವಧನ, ₹2,000 ಮಾಸಿಕ ಪ್ರೋತ್ಸಾಹಧನ ಹಾಗೂ ₹1,000 ಟಿಬಿಐ ಪ್ರೋತ್ಸಾಹಧನವನ್ನು ಯಾವುದೇ ಕಡಿತವಿಲ್ಲದೆ ಪಾವತಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಗೌರವಧನ ಮತ್ತು ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಕಾರ್ಯಕರ್ತೆಯರಿಗೆ ಕ್ಲೈಂ ಮತ್ತು ಸ್ಯಾಂಕ್ಷನ್ ಚೀಟಿಯ ಪ್ರತಿಯನ್ನು ವೇತನ ಚೀಟಿಯಾಗಿ ಕಡ್ಡಾಯವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರು ನಿರ್ವಹಿಸಿದ ಎಲ್ಲ ಚಟುವಟಿಕೆಗಳಿಗೆ ನಿಗದಿತ ಪ್ರೋತ್ಸಾಹಧನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮಾಸಿಕ ಗೌರವಧನ ಮತ್ತು ಪ್ರೋತ್ಸಾಹಧನ ಯಾವ ತಿಂಗಳಿಗೆ ಸಂಬಂಧಿಸಿದ್ದು ಎಂಬ ಮಾಹಿತಿ ತಿಳಿಯಲು ಬ್ಯಾಂಕ್ ಪಾಸ್‌ಬುಕ್‌ನಲ್ಲಿ ತಿಂಗಳ ವಿವರ ಮುದ್ರಣವಾಗುವ ವ್ಯವಸ್ಥೆ ಮಾಡಬೇಕು. ಅಲ್ಲದೆ, ಹತ್ತು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದವರು ಹಾಗೂ ನಿವೃತ್ತರಾದ ಕಾರ್ಯಕರ್ತೆಯರಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ರೋಗಿಗಳ ಕಫದ ಮಾದರಿಯನ್ನು ಸಂಗ್ರಹಿಸಿ ತರುವುದು ಆಶಾ ಕಾರ್ಯಕರ್ತೆಯರ ಕೆಲಸವಲ್ಲದಿದ್ದರೂ, ಪ್ರತಿ ತಿಂಗಳು ಐದರಿಂದ ಹತ್ತು ರೋಗಿಗಳ ಕಫದ ಮಾದರಿ ತರಲೇಬೇಕೆಂದು ಒತ್ತಾಯಿಸಲಾಗುತ್ತಿದೆ. ಇಂತಹ ಒತ್ತಡವನ್ನು ನಿಲ್ಲಿಸಬೇಕು. ಮೊಬೈಲ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೆ ಸಮಸ್ತ ಹಾಗೂ ಇತರ ಆ್ಯಪ್‌ಗಳಲ್ಲಿ ಆನ್‌ಲೈನ್ ಕೆಲಸ ಮಾಡುವಂತೆ ಒತ್ತಾಯಿಸಬಾರದು ಎಂದು ಆಗ್ರಹಿಸಿದರು.

ಮಾಸಿಕ ₹15 ಸಾವಿರ ಗೌರವಧನಕ್ಕೆ ಆಗ್ರಹ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವಧನ ಹಾಗೂ ವಿವಿಧ ಪ್ರೋತ್ಸಾಹಧನಗಳನ್ನು ಪ್ರತ್ಯೇಕವಾಗಿ ಪಾವತಿಸುತ್ತಿರುವುದರಿಂದ ಪ್ರತಿ ತಿಂಗಳು ಹಣ ಪಾವತಿಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡುವ ಗೌರವಧನ ಹಾಗೂ ಪ್ರೋತ್ಸಾಹಧನಗಳನ್ನು ಒಟ್ಟುಗೂಡಿಸಿ ಮಾಸಿಕ ₹15 ಸಾವಿರ ಗೌರವಧನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಜಿ. ದೇಸಾಯಿ ಮತ್ತು ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ, ಯಾದಗಿರಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಇದರಿಂದ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಮೂಲಸೌಕರ್ಯಗಳನ್ನು ಒದಗಿಸದೆ ಆನ್‌ಲೈನ್ ಕೆಲಸಕ್ಕೆ ಒತ್ತಾಯಿಸುತ್ತಿರುವುದನ್ನು ಇಲಾಖೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಟ್ಟದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 5ರಿಂದ 11ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ ಆಚರಿಸಲು ಸಂಘ ಕರೆ ನೀಡಿದೆ. ಇದರ ಭಾಗವಾಗಿ ಯಾದಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಾಕಿ ಹಣ ಪಾವತಿಗೆ ಡಿಎಚ್‌ಒ ಭರವಸೆ

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಬಿರಾದಾರ್, ಜಿಲ್ಲೆಯಲ್ಲಿ ಗೌರವಧನ ಹಾಗೂ ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗಿರುವುದನ್ನು ಒಪ್ಪಿಕೊಂಡು, ಇನ್ನೊಂದು ಅಥವಾ ಎರಡು ದಿನಗಳಲ್ಲಿ ಎಲ್ಲರಿಗೂ ಹಣ ಪಾವತಿಸುವುದಾಗಿ ಭರವಸೆ ನೀಡಿದರು.

ಆನ್‌ಲೈನ್ ಕೆಲಸ ಮಾಡಲು ಒತ್ತಾಯಿಸುವುದಿಲ್ಲ ಎಂದೂ ತಿಳಿಸಿದರು. ರಾಜ್ಯ ಮಟ್ಟದ ಬೇಡಿಕೆಗಳ ಕುರಿತು ಆರೋಗ್ಯ ಸಚಿವರ ಕಚೇರಿಗೆ ಪತ್ರ ಕಳುಹಿಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಜಿ. ದೇಸಾಯಿ, ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ, ಉಪಾಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ದೇವಕಿ, ಸಹ ಕಾರ್ಯದರ್ಶಿ ಅಶ್ವಿನಿ ಗಣಾಚಾರಿ, ತಾಯಮ್ಮ, ಶಾಂತಮ್ಮ, ಶಿವಮೊಗ್ಗಮ್ಮ, ಅನಿತಾ ತಂಬಾಕೆ, ಗೀತಾ, ವಿಜಯಲಕ್ಷ್ಮಿ, ಕೃಪಾ, ದಾನಮ್ಮ, ಇಂದ್ರಮ್ಮ, ಚಂದಮ್ಮ, ರಾಜೇಶ್ವರಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor