ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರ ಆಗ್ರಹ
ಸುರಪುರ: ವಾಲ್ಮೀಕಿ ಸಮುದಾಯದ ಹಿರಿಯ ರಾಜಕೀಯ ಮುಖಂಡ ಹಾಗೂ ಕರ್ನಾಟಕ ಜನತೆಯ ಅಹಿಂದ ನಾಯಕ ಎಂದು ಚಿರಪರಿಚಿತರಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘಟನೆಯ ನೇತೃತ್ವದಲ್ಲಿ ಅನೇಕ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗಬೇಕಾದವರು. ಈ ರಾಜ್ಯದಲ್ಲಿ ಸುಮಾರು 40 ರಿಂದ 50 ಜನ ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಇರುವ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದಲ್ಲಿ ರಾಜ್ಯದಲ್ಲಿರುವ ವಾಲ್ಮೀಕಿ ನಾಯಕ ಸಮಾಜಕ್ಕೆ ಒಂದು ಮಟ್ಟಿಗಿನ ಸ್ಥಾನಮಾನ ದೊರೆತಂತಾಗಲಿದೆ. ವಾಲ್ಮೀಕಿ ನಾಯಕ ಸಮಾಜದ 15 ಜನ ಶಾಸಕರಿದ್ದು ಕೇವಲ ಇಬ್ಬರಿಗೆ ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರು ಹಿರಿಯ ರಾಜಕೀಯ ಮುಖಂಡರು, ಬುದ್ಧ ಬಸವ ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆಯನ್ನು ಇಟ್ಟವರು. ಮಾನವೀಯತೆಯ ಸಾಹುಕಾರ ಎಂದೇ ಖ್ಯಾತರಾಗಿರುವ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮುಖಂಡರು ಹೇಳಿದರು.
ಅದೇ ರೀತಿ ಕಾಂಗ್ರೆಸ್ ಪಕ್ಷದ ಯುವ ಶಾಸಕರಾಗಿರುವ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿಗೆ ಅಧ್ಯಕ್ಷರನ್ನು ಮಾಡಬೇಕು. ಹಿಂದೆ ಅವರ ತಂದೆ ರಾಜಾ ವೆಂಕಟಪ್ಪ ನಾಯಕ ಅವರು ನಾಲ್ಕು ಬಾರಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅವರು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಸಂದರ್ಭದಲ್ಲಿಯೇ ಅಕಾಲಿಕವಾಗಿ ನಿಧನರಾಗಿದ್ದು, ಈಗ ಅವರ ಸುಪುತ್ರರಾದ ರಾಜಾ ವೇಣುಗೋಪಾಲ ನಾಯಕರು ಶಾಸಕರಾಗಿರುವುದರಿಂದ ಅವರ ತಂದೆಯವರಂತೆ ಇವರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಯ್ಯಣ್ಣ ಹಾಲಬಾವಿ, ದೇವಿಂದ್ರಪ್ಪ ಬಳಿಚಕ್ರ, ನಗರಸಭೆಯ ಮಾಜಿ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ,ರಾಜಾ ರಾಮಪ್ಪ ನಾಯಕ (ಜೇಜಿ) ಹಾಗೂ ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ವೆಂಕಟೇಶ ಬೇಟೆಗಾರ ಮತ್ತು ಸಂಜೀವ ನಾಯಕ ತಿಂಥಣಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೇಮನೂರ, ಭೀಮು ನಾಯಕ ಮಲ್ಲಿಬಾವಿ,ನಾಗರಾಜ ಪ್ಯಾಪ್ಲಿ,ಪರಮಣ್ಣ ವಡಕೇರಿ, ದೇವಿಂದ್ರಪ್ಪ ಚಿಕ್ಕನಹಳ್ಳಿ, ಕನಕಾಚಲ ಜಾಗಿರದಾರ ಯಡಿಯಾಪುರ,ಶಿವಮೋನಯ್ಯ ನಾಯಕ ದೇವರಗೋನಾಲ,ಬಸನಗೌಡ ಹಾಲಗೇರಾ, ಸಾಹೇಬಗೌಡ ಶಖಾಪುರ, ದೇವರಾಜ ಗಿರಣಿ,ಶರಣಪ್ಪ ಮಕಾಶಿ ಇದ್ದರು.