ಸುರಪುರ: ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನ.30ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ, ನ.6ರಂದು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ಸುರಪುರ ಬಂದ್ ಕೂಡ ನಡೆಸಲಾಗುವುದು ಎಂದು ವಿವಿಧ ಸಾಮೂಹಿಕ ಸಂಘಟನೆಗಳ ಮುಖಂಡರು ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ನ.6ರ ಬಂದ್‌ಗೆ ಎಲ್ಲ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿ ಭಾಗವಹಿಸಬೇಕು. ವ್ಯಾಪಾರಸ್ಥರು ಕೂಡ ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹಗಲು ಹೊತ್ತಿನಲ್ಲಿ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಣೆಗಾಗಿ ಕೆಲಸದ ಅವಶ್ಯಕತೆಯಿದ್ದು, ಅವರಿಗೆ ಮರಳು ಲಭ್ಯವಾಗುವಂತೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕು. ಈ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ದಲಿತ ವಿಮೋಚನಾ ಸೇನೆ ಅಧ್ಯಕ್ಷ ಶರಣು ಆನಸೂರ, ಮಾದಿಗ ಮಹಾಸಭಾ ರಾಜ್ಯ ಸಂಚಾಲಕ ಭೀಮಶಂಕರ ಬಿಲ್ಲವ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮರಿಲಿಂಗಪ್ಪ, ಜೆಡಿಎಸ್ ಮುಖಂಡ ಉಸ್ತಾದ್ ವಜಾಹತ್ ಹುಸೇನ್, ರಾಮ್ ಸೇನಾ ಜಿಲ್ಲಾಧ್ಯಕ್ಷ ಶರಣು ನಾಯಕ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ, ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಬಸವರಾಜ ಹಾದಿಮನಿ, ಕಕ್ಕೇರಾ ಪುರಸಭೆ ಸದಸ್ಯ ಮಲ್ಲು ದಂಡಿನ್, ನೆರವು ಕಟ್ಟಡ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಎಲಿಗಾರ, ಕೆಡಿಎಸ್‌ಎಸ್ ಡಿ.ಜಿ. ಸಾಗರ ಬಣದ ಜಿಲ್ಲಾ ಸಂಚಾಲಕ ಶಿವಲಿಂಗ ಹಸನಾಪುರ, ಲಕ್ಷ್ಮೀಕಾಂತ ದೇವರಗೋನಾಲ, ದಾನಪ್ಪ ಕಡಿಮನಿ ಲಕ್ಷ್ಮೀಪುರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ ಸೂಗೂರ, ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ, ಶಿವರಾಜ ನಾಯಕ, ಪ್ರಾಂತ ರೈತ ಸಂಘದ ಭೀಮಣ್ಣ ಕೆಂಗುರಿ ಹಾಗೂ ದೇವಿಂದ್ರಪ್ಪ ಅಜ್ಜಕೋಲಿ ಸೇರಿದಂತೆ ಹಲವರು ಮಾತನಾಡಿ ಸುರಪುರ ಬಂದ್‌ಗೆ ಬೆಂಬಲ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ಮಾನಪ್ಪ ದೇವರಗೋನಾಲ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೇಮನೂರ, ರೈತ ಸಂಘದ ಗೌಡಪ್ಪ ಬಿಚ್ಚಗತ್ತಿಕೇರ, ರೈತ ಸಂಘದ ಜಿಲ್ಲಾಧ್ಯಕ್ಷ ರಂಗನಾಥ ನಾಯಕ, ಸಂದೀಪ ಜೋಷಿ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor