‘ಪ್ಲಾಸ್ಟಿಕ್ ಮುಕ್ತ ಯಾದಗಿರಿ’ ಅಭಿಯಾನಕ್ಕೆ ಚಾಲನೆ

ಪ್ಲಾಸ್ಟಿಕ್ ತ್ಯಜಿಸಿ ಆರೋಗ್ಯಕರ ಸಮಾಜ ನಿರ್ಮಿಸೋಣ: ನ್ಯಾಯಾಧೀಶ ಮರುಳಸಿದ್ದಾರಾದ್ಯ

Update: 2026-07-19 17:22 IST

ಯಾದಗಿರಿ: ಸಕಲ ಜೀವರಾಶಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಉತ್ತಮ ಆರೋಗ್ಯ ಕಾಪಾಡಿಕೊಂಡು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದಾರಾದ್ಯ ಎಚ್.ಜೆ. ಕರೆ ನೀಡಿದರು.

ನಗರದ ಗೃಹ ರಕ್ಷಕ ದಳ ಕಚೇರಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ನಗರಸಭೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಪ್ಲಾಸ್ಟಿಕ್ ಮುಕ್ತ ಯಾದಗಿರಿ” ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಂಬಂಧಿಸಿದ ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳಾಗಿದ್ದು, ಪರಿಸರ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವೂ ಹಲವು ವರ್ಷಗಳ ಹಿಂದೆಯೇ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಆದರೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಂತಿಲ್ಲ. ಪರಿಸರ ಹಾನಿಗೆ ಇದು ಪ್ರಮುಖ ಕಾರಣವಾಗಿರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣವು ಒಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ಕೈಜೋಡಿಸಬೇಕು. ಗೃಹ ರಕ್ಷಕ ದಳದ ವತಿಯಿಂದ ಆಯೋಜಿಸಿರುವ ಜಾಗೃತಿ ಜಾಥಾಕ್ಕೆ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರು ನೀಡಿರುವ ಬೆಂಬಲ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಜುಲೈ 16ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವ್ಯಾಪಾರಸ್ಥರು ಹಾಗೂ ವಕೀಲರೊಂದಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಲಾಗಿದೆ. ಈ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನಗರಸಭೆ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಗೃಹ ರಕ್ಷಕ ದಳ ಕಚೇರಿಯಿಂದ ಆರಂಭವಾದ ಜಾಗೃತಿ ಜಾಥಾವು ಶಾಸ್ತ್ರಿ ವೃತ್ತ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹಳೆ ಬಸ್ ನಿಲ್ದಾಣ ಹಾಗೂ ಸುಭಾಷ್ ಚಂದ್ರ ಬೋಸ್ ವೃತ್ತ ಮಾರ್ಗವಾಗಿ ಹಳೆ ನ್ಯಾಯಾಲಯದವರೆಗೆ ಸಾಗಿತು. ಜಾಥಾದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದಾರಾದ್ಯ ಎಚ್.ಜೆ., ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದರು.

ಈ‌ ವೇಳೆ ಹೋಮ ಗಾರ್ಡ್ ಕರ್ಮಾಡೆಂಟ್ ಈರಣ್ಣ ಬಡಿಗೇರ, ಸಹಾಯಕ ಪರಿಸರ ಅಧಿಕಾರಿ ಶಂಕುಂತಲಾ, ವಿಜಯ ವಿಠಲ್ ಸೇವಾ ಸಂಸ್ಥೆ ಅಧ್ಯಕ್ಷರಾದ‌ ವಿಠಲ್ ಕುಲಕರ್ಣಿ, ಶಶಿ‌ಚಾರಿಟೇಬರ್ ಟ್ರಸ್ಟ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ, ನಗರಸಭೆ ಕಿರಿಯ ಆರೋಗ್ಯ ನಿರಿಕ್ಷಕಿ ಶರಣಮ್ಮ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News