Yadgiri | ವಿದ್ಯುತ್ ಸ್ಥಗಿತ ಖಂಡಿಸಿ ಜೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ

Update: 2026-07-18 19:46 IST

ಯಾದಗಿರಿ: ಯರಗೋಳ ವಿದ್ಯುತ್ ಮಾರ್ಗದಿಂದ ಬಾಚವಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಹಾಗೂ ತಾಂಡಾಗಳ ರೈತರ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ತ್ರಿಫೇಸ್ ವಿದ್ಯುತ್ ಪೂರೈಕೆಯನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಬಾಚವಾರ ಗ್ರಾಮದ ರೈತರು ಶನಿವಾರ ನಗರದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೆಸ್ಕಾಂ ಕಚೇರಿಯ ಮುಖ್ಯ ದ್ವಾರಕ್ಕೆ ಶಾಂತಿ ಬಿಗಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಕ್ಷಣ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಬಡಿಗೆರ, ಯರಗೋಳ ಮಾರ್ಗದಿಂದ ಮಧ್ಯಾಹ್ನದವರೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿತ್ತು. ಬಳಿಕ ಕೆಲವರ ಒತ್ತಡ ಹಾಗೂ ಜೆಸ್ಕಾಂ ಸಿಬ್ಬಂದಿಯ ಸಮ್ಮುಖದಲ್ಲೇ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರದ ನಿಯಮದಂತೆ ಪ್ರತಿದಿನ ಏಳು ಗಂಟೆಗಳ ಗುಣಮಟ್ಟದ ತ್ರಿಫೇಸ್ ವಿದ್ಯುತ್ ನೀಡಬೇಕಾದರೂ, ಒಂದು ಅಥವಾ ಎರಡು ಗಂಟೆಗಳಲ್ಲೇ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಬಾಚವಾರ, ಹನುಮಾನ ತಾಂಡಾ, ಹೊಸ ಶಾಂಡಾ, ಲಿಂಗಸಳ್ಳಿ ಕಾಂಡಾ ಸೇರಿದಂತೆ ಹಲವು ಗ್ರಾಮಗಳ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೂ ತಂದಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

15 ದಿನಗಳಲ್ಲಿ ಲಿಂಕ್ ಲೈನ್: ಎಇಇ ಭರವಸೆ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಎಇಇ ಮಾರ್ಕಂಡೇಶ್ವರ ಅವರು, ಹತ್ತಿಕುಣಿ 33 ಕೆವಿ ವಿದ್ಯುತ್ ಉಪಕೇಂದ್ರದಿಂದ ಪ್ರತ್ಯೇಕ ಲಿಂಕ್ ಲೈನ್ ನಿರ್ಮಿಸಿ ಬಾಚವಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಮುಂದಿನ 15 ದಿನಗಳಲ್ಲಿ ವಿದ್ಯುತ್ ಪೂರೈಕೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಇದೀಗ ಅಗತ್ಯ ಅನುಮತಿ ಪಡೆದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪೂರ ಅವರು ರೈತರ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಯರಗೋಳದಲ್ಲೂ ಪ್ರತಿಭಟನೆ :

ಇದೇ ವೇಳೆ ಯರಗೋಳ ಗ್ರಾಮದಲ್ಲೂ ರೈತರು ಸ್ಥಳೀಯ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ಯರಗೋಳ ಮಾರ್ಗದಿಂದ ಬಾಚವಾರಕ್ಕೆ ವಿದ್ಯುತ್ ಪೂರೈಕೆ ಮಾಡಬಾರದು ಎಂದು ಒತ್ತಾಯಿಸಿದರು. ಯರಗೋಳ ರೈತರಿಗೆ ತೊಂದರೆಯಾಗದಂತೆ ಬಾಚವಾರ ಭಾಗಕ್ಕೆ ಹತ್ತಿಕುಣಿ ಉಪಕೇಂದ್ರದಿಂದ ಪ್ರತ್ಯೇಕ ಸಂಪರ್ಕ ಕಲ್ಪಿಸಲಾಗುವುದು ಎಂದು ಎಇಇ ಮಾರ್ಕಂಡೇಶ್ವರ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News