ಹುಣಸಗಿ | ಕಾಲುವೆಗೆ ನೀರು ಬಿಡದಿದ್ದರೆ ಉಗ್ರ ಹೋರಾಟ: ರೈತ ಮುಖಂಡ ಮಲ್ಲಣ್ಣಗೌಡ ಎಚ್ಚರಿಕೆ

Update: 2026-07-22 21:56 IST

ರೈತ ಮುಖಂಡ ಮಲ್ಲಣ್ಣಗೌಡ

ಹುಣಸಗಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬುಧವಾರ 63 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ ಜಲಾಶಯದಿಂದ ಕೇವಲ 12,500 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಎಡದಂಡೆ ಕಾಲುವೆಗಳಿಗೆ ನೀರು ಹರಿಸದಿರುವುದು ರೈತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹುಣಸಗಿ ರೈತ ಸಂಘ ತಾಲೂಕು ಅಧ್ಯಕ್ಷರಾದ ಮಲ್ಲನಗೌಡ ಎಮ್ ನಗನೂರ್ ಅವರು ಎಚ್ಚರಿಸಿದರು.

ಪತ್ರಿಕಾ ಹೇಳ ನೀಡಿದ ಅವರು, ಈಗಾಗಲೇ ರೈತರು ಭತ್ತದ ಸಸಿ ಮಡಿ ಹಾಕಿದ್ದು, ಸಸಿ ಹಾಕಿ 30ರಿಂದ 40 ದಿನಗಳು ಕಳೆದಿವೆ. ಈ ವಾರದೊಳಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ಭತ್ತದ ಬೆಳೆ ಒಣಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ. ಜಲಾಶಯದಲ್ಲಿ ಸಮರ್ಪಕ ಪ್ರಮಾಣದಲ್ಲಿ ನೀರಿನ ಒಳಹರಿವು ಇದ್ದರೂ ಅಧಿಕಾರಿಗಳ ವಿಳಂಬ ಮತ್ತು ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ನೀರಾವರಿ ಸಚಿವರು ಹಾಗೂ ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳು ಕೂಡಲೇ ಐಸಿಸಿ ಸಭೆ ಕರೆದು ಎಡದಂಡೆ ಕಾಲುವೆಗಳಿಗೆ ನೀರು ಹರಿಸುವ ಕುರಿತು ತುರ್ತು ನಿರ್ಧಾರ ಕೈಗೊಳ್ಳಬೇಕು. ರೈತರ ಬದುಕಿನ ಪ್ರಶ್ನೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.

ಜಲಾಶಯದಲ್ಲಿ ನೀರು ಇದ್ದರೂ ರೈತರ ಹೊಲಗಳಿಗೆ ತಲುಪದಿದ್ದರೆ ಆ ನೀರಿನ ಪ್ರಯೋಜನವೇನು? ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಕೂಡಲೇ ಕಾಲುವೆಗಳಿಗೆ ನೀರು ಹರಿಸದಿದ್ದರೆ ರೈತರೊಂದಿಗೆ ರಸ್ತೆ ತಡೆ, ಕೆಬಿಜೆಎನ್‌ಎಲ್ ಕಚೇರಿ ಮುತ್ತಿಗೆ ಹಾಗೂ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಇದರಿಂದ ಉಂಟಾಗುವ ಎಲ್ಲ ಬೆಳವಣಿಗೆಗಳಿಗೆ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಮಲ್ಲಣ್ಣಗೌಡ ಕಟುವಾಗಿ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News