ಕ್ರೀಡೆಗಳು ಮಾನಸಿಕ, ದೈಹಿಕ ಆರೋಗ್ಯವನ್ನು ಗಟ್ಟಿಗೊಳಿಸುತ್ತವೆ: ಶಾಸಕ ಶರಣಗೌಡ ಕಂದಕೂರ
ಯಾದಗಿರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಟ್ಟಿಗೊಳಿಸುವ ಮೂಲಕ ಉತ್ತಮ ಆರೋಗ್ಯ ಹೊಂದಲು ಬಹಳ ಸಹಕಾರಿಯಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಇಲ್ಲಿನ ಟೆನಿಸ್ ಕ್ಲಬ್ ವತಿಯಿಂದ ಆಫಿಸರ್ ಕ್ಲಬ್ ಆವರಣದಲ್ಲಿ ನಡೆದ ಕ್ರೀಡೆಗಳಲ್ಲಿ ವಿಜೇತ ಆಟಗಾರರಿಗೆ ಮಾಜಿ ಶಾಸಕ ದಿ.ನಾಗಣ್ಣಗೌಡ ಕಂದಕೂರ ಫೌಂಡೇಶನ್ ನಿಂದ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ, ದೇಶಿಯ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸುವ ಮೂಲಕ ಆಟಗಳನ್ನು ಆಡಬೇಕು. ಸೋಲು ಗೆಲುವಿನ ಮೆಟ್ಟಿಲು ಎಂಬ ಭಾವನೆಯಲ್ಲಿ ಮತ್ತು ಸ್ಪರ್ಧಾತ್ಮಕ ಮನಸ್ಸಿನಿಂದ ಆಟಗಾರರು ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರು.
ಸದೃಢ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸರಿಯಾದ ಔಷಧಿ ಇದ್ದಂತೆ, ನಿತ್ಯ ವಾಕಿಂಗ್, ಯೋಗ,ಧ್ಯಾನ ಮತ್ತು ಆಟಗಳನ್ನು ಆಡುವುದರಿಂದ ಬಿಪಿ, ಶುಗರ್ ಸೇರಿದಂತೆಯೇ ಇತರೆ ರೋಗಗಳನ್ನು ತಡೆಯಬಹುದೆಂದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಇಂದು ಕ್ರೀಡೆಗಳಿಗೆ ಬಹಳ ಮಹತ್ವವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರದಲ್ಲಿ ಮಾನ್ಯತೆ ಹೆಚ್ಚಾಗಿದೆ. ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರ ಆರ್ಥಿಕ ಸಹಕಾರ ಸೇರಿದಂತೆ ಸೌಲಭ್ಯಗಳು ನೀಡುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದರು.
ಈ ವೇಳೆ ಉದ್ಯಮಿ ಮಲ್ಲಿಕಾರ್ಜುನರೆಡ್ಡಿ ಕಂದಕೂರ, ಹೆಚ್ಚುವರಿ ಎಸ್ ಪಿ ಧರಣೇಶ, ಆಯೋಜಕರಾದ ಅಜಯರೆಡ್ಡಿ ಏಲ್ಹೆರಿ, ನೀಲಕೃಷ್ಣ, ಪ್ರಸಾದ, ಡಾ.ಶರಣಗೌಡ ಕೊಡ್ಲಾ, ಮಹೇಶರೆಡ್ಡಿ ಹತ್ತಿಕುಣಿ ಇತರರಿದ್ದರು.