ಸುರಪುರ | ಕುಡಿಯುವ ನೀರಿನ ಸಮಸ್ಯೆ ವಿರೋಧಿಸಿ ಅರಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ

Update: 2026-08-04 19:04 IST

ಸುರಪುರ : ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಖಂಡಿಸಿ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ದುರ್ಗಪ್ಪ ಪೂಜಾರಿ, ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಎರಡು ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿರುವ ಒಂದೇ ಸಾರ್ವಜನಿಕ ನಳವನ್ನು ಎಲ್ಲರೂ ಅವಲಂಬಿಸಿರುವುದರಿಂದ ಇದೀಗ ಅದರಿಂದಲೂ ನೀರು ಬರುತ್ತಿಲ್ಲ. ವಿಶೇಷವಾಗಿ ದಲಿತ ಕೇರಿಯಲ್ಲಿ ಕುಡಿಯುವ ನೀರಿನ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಪ್ರತಿದಿನ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಖಾಸಗಿ ಬೋರ್‌ವೆಲ್‌ಗಳಿಂದ ನೀರು ಕೇಳಿದರೆ ಕೆಲವೊಮ್ಮೆ ಒಂದು ಕೊಡ ನೀರು ಸಿಗುತ್ತದೆ, ಇನ್ನೊಮ್ಮೆ ಸಿಗುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತ ಕೇರಿಯ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಪ್ರತಿದಿನ ಖಾಲಿ ಕೊಡಗಳನ್ನು ಹಿಡಿದು ನೀರಿಗಾಗಿ ಅಲೆದಾಡಬೇಕಾಗಿದೆ ಎಂದು ದೂರಿದರು.

ಕೂಡಲೇ ದಲಿತ ಕೇರಿಯಲ್ಲಿ ಬೋರ್‌ವೆಲ್ ಕೊರೆಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ದೇವಪುರ ಗ್ರಾಮ ಪಂಚಾಯಿತಿ ಹಾಗೂ ಸುರಪುರ ತಾಲೂಕು ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರೆಲ್ಲರೂ ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಮಲ್ಲಪ್ಪ, ಬಸವರಾಜ ತಳಗೇರಿ, ಚನ್ನಬಸವ ತಳಗೇರಿ, ಪ್ರವೀಣ,ಹುಲಗಮ್ಮ, ಲಕ್ಷ್ಮಿ, ರಂಗಮ್ಮ, ಆದಪ್ಪ, ಮೌನೇಶ, ಶರಣಮ್ಮ, ಹಣಮಂತಿ, ನಂದಮ್ಮ, ಬಸಪ್ಪ, ಕೆಂಚಪ್ಪ, ಹೊಳೆಪ್ಪ ಸೇರಿದಂತೆ ಅನೇಕ ಜನ ಮಹಿಳೆಯರು ಹಾಗೂ ಮಕ್ಕಳು ಕೂಡ ಖಾಲಿ ಕೊಡಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News