Yadgiri | ವಡಗೇರಾದಲ್ಲಿ ‘ಪ್ಲಾಸ್ಟಿಕ್ ಮುಕ್ತ’ ಜಾಗೃತಿ ಜಾಥಾ
ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ : : ನ್ಯಾ.ಮರಿಯಪ್ಪ ಕರೆ
ಯಾದಗಿರಿ: ಪಟ್ಟಣದ ವಡಗೇರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಶಿ ಚಾರಿಟೇಬಲ್ ಅಂಡ್ ಎಜ್ಯುಕೇಶನ್ ಟ್ರಸ್ಟ್, ವಿಜಯ ವಿಠ್ಠಲ ಸೇವಾ ಸಂಸ್ಥೆ, ಡಿ.ಡಿ.ಯು ಪದವಿ ಪೂರ್ವ ಕಾಲೇಜು ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ‘ಪ್ಲಾಸ್ಟಿಕ್ ಮುಕ್ತ ವಡಗೇರಾ’ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಿಂದ ಆರಂಭವಾದ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಚಾಲನೆ ನೀಡಿದರು. ವಾಲ್ಮೀಕಿ ಚೌಕ್, ಚಕ್ರಕಟ್ಟ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಬಸ್ ನಿಲ್ದಾಣದವರೆಗೆ ಸಂಚರಿಸಿದ ಜಾಥಾ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ನ್ಯಾಯಾಧೀಶ ಮರಿಯಪ್ಪ, ಏಕಬಳಕೆ ಪ್ಲಾಸ್ಟಿಕ್ ಪರಿಸರ ಹಾಗೂ ಮಾನವ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಭೂಮಿ, ನೀರು ಮತ್ತು ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆಯ ಚೀಲಗಳನ್ನು ಬಳಸಬೇಕು. ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಹಣಮಂತಪ್ಪ ಕೊಪ್ಪಳ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರವಿಲ್ಲದೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಶಶಿ ಚಾರಿಟೇಬಲ್ ಅಂಡ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಉತ್ತಮ ಬದಲಾವಣೆ ತರಲು ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನತೆ ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಡಿಒ ಶರಣಗೌಡ ಊಳ್ಳೆಸೂಗೂರ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ನಾಗಪ್ಪ ನಾಯ್ಕಲ್, ಬನಸಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಚಯ್ಯ ಸ್ವಾಮಿ ಹಿರೇಮಠ, ಡಿ.ಡಿ.ಯು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೊನ್ನಯ್ಯ ಕೊಂಕಲ್, ಪ್ರೊಬೇಷನರಿ ಪಿಎಸ್‌ಐ ಅಕ್ಷಯ್ ಕುಮಾರ್, ಪೊಲೀಸ್ ಸಿಬ್ಬಂದಿ ಲಾಲ್ ಅಹ್ಮದ್ ಹಾಗೂ ಅಬ್ದುಲ್ ಭಾಷಾ, ವಿಜಯ ವಿಠ್ಠಲ ಸೇವಾ ಸಂಸ್ಥೆಯ ವಿಜಯ ಕುಲಕರ್ಣಿ, ಕರವೇ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ, ನವಚೇತನ ಟ್ರಸ್ಟ್ ಅಧ್ಯಕ್ಷ ನಿಂಗಣ್ಣ ಜಡಿ, ರೈತ ಮುಖಂಡ ಫಕೀರ ಅಹ್ಮದ ಮರಡಿ, ಮುಖ್ಯ ಶಿಕ್ಷಕ ಮುದುಕಪ್ಪ, ಹಳೆಪ್ಪ ತೇಜೆರ, ಅರೆಕಾಲಿಕ ಸ್ವಯಂಸೇವಕರಾದ ವೆಂಕಟೇಶ ಕಟ್ಟಿಮನಿ, ಆನಂದ ಯಂಪಾಡ, ದೇವಿಂದ್ರಮ್ಮ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಭವಾನಿ, ಕಮಲ, ಶ್ರೀದೇವಿ, ಆರೋಗ್ಯ ಇಲಾಖೆಯ ಡಾ.ಶ್ರೀವಿದ್ಯಾ ವೆಂಕಟೇಶ ಅಚಗೆರಿ, ಕಿರಾಣಿ ಅಂಗಡಿ ಮಾಲೀಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.