ಸುರಪುರ: ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರು ಹಾಗೂ ಯಾವುದೇ ಶರಣ ಮಹಾತ್ಮರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೇವಪುರದ ಜಡಿ ಶಾಂತಲಿಂಗೇಶ್ವರ ಹಿರೇಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳು ಹಾಗೂ ಬಸವಾಭಿಮಾನಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ‘ಬಸವ ಮಂಟಪ’ ಕೃತಿ, ಅದರ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರು ಸೂರ್ಯನಿದ್ದಂತೆ. ರವಿ ಹಂಜ್ ಯಾವುದೇ ಸಂಶೋಧಕರಲ್ಲ. ಈ ಹಿಂದೆ ವಿಶ್ವವಾಣಿ ಪತ್ರಿಕೆಯಲ್ಲಿ ಅವರು ಲೇಖನಗಳನ್ನು ಬರೆದಾಗಲೇ ಪ್ರತಿಭಟನೆ ನಡೆಸಿದ್ದರೆ, ಇಂದು ಇಂತಹ ಅವಹೇಳನಕಾರಿ ಘಟನೆ ನಡೆಯುತ್ತಿರಲಿಲ್ಲ ಎಂದರು.

ಸರ್ಕಾರ ರವಿ ಹಂಜ್ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು, ಕೂಡಲೇ ಅವರನ್ನು ಬಂಧಿಸಬೇಕು. ವಿವಾದಿತ ಕೃತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮುಂದೆ ಯಾರಾದರೂ ಶರಣರು, ಮಹಾತ್ಮರು ಹಾಗೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಂಗಡಿ ಕನ್ನಳ್ಳಿ ಸೇರಿದಂತೆ ಹಲವು ಮುಖಂಡರು ಮಾತನಾಡಿ, 12ನೇ ಶತಮಾನದ ಮಹಾನ್ ಚೇತನ, ವಿಶ್ವಗುರು, ಸಮಾನತೆಯ ಹರಿಕಾರ ಹಾಗೂ ಸಕಲರಿಗೂ ಲೇಸನ್ನೇ ಬಯಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರರ ಕುರಿತು ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಜಗತ್ತೇ ಒಪ್ಪಿಕೊಂಡಿರುವ ಮಹಾನ್ ವ್ಯಕ್ತಿಯಾದ ಬಸವೇಶ್ವರರ ಕುರಿತು ನಕಾರಾತ್ಮಕವಾಗಿ ಬಿಂಬಿಸಿರುವುದನ್ನು ಮಹಾಸಭಾ, ಸಮಸ್ತ ವೀರಶೈವ ಲಿಂಗಾಯತ ಸಂಘಟನೆಗಳು ಹಾಗೂ ಬಸವಾಭಿಮಾನಿಗಳು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ರವಿ ಹಂಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಕೃತಿಯ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಜಮದರಖಾನಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜು ಕುಂಬಾರ, ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಸೂಗೂರೇಶ ವಾರದ, ಶಿವರಾಜ ಕಲಕೇರಿ, ಜಗದೀಶ ಪಾಟೀಲ ಹಾಗೂ ಸಿದ್ದನಗೌಡ ಹೆಬ್ಬಾಳ ಮಾತನಾಡಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಪೂಜ್ಯ ಪ್ರಭುಲಿಂಗ ಮಹಾಸ್ವಾಮೀಜಿ, ನಗನೂರಿನ ದಾಸೋಹ ಮಠದ ಶರಣಪ್ಪ ಶರಣರು, ಶರಣಯ್ಯ ಸ್ವಾಮಿ ಮಠಪತಿ, ವಿರೇಶ ಪಂಚಾಂಗಮಠ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪಮಠ, ಶರಣಯ್ಯ ಸ್ವಾಮಿ ಲಕ್ಷ್ಮಿಪುರ, ಮುಖಂಡರಾದ ಬಸನಗೌಡ ಪಾಟೀಲ ದೇವಾಪುರ, ಚನ್ನಪ್ಪಗೌಡ ಜಕ್ಕನಗೌಡ್ರು, ವಿರೇಶ ನಿಷ್ಠಿ ದೇಶಮುಖ, ಕೃಷ್ಣಾರೆಡ್ಡಿ ಮುದನೂರ, ಚೆನ್ನಪ್ಪ ಗುಂಡಾನೂರ, ಶಿವನಗೌಡ ಸೂಗೂರು, ಶರಣಬಸವ ಹೂಗಾರ, ಪ್ರಕಾಶ ಬಣಗಾರ, ಮಹೇಶ ಹಳ್ಳದ, ರವಿ ಹೆಮನೂರ, ಸಿದ್ದನಗೌಡ ಹಂದ್ರಾಳ, ಶರಣು ಮುಧೋಳ, ಮಲ್ಲಣ್ಣ ಸಾಹುಕಾರ, ರವಿ ಗುತ್ತೇದಾರ, ಚಂದ್ರಶೇಖರ ನಾಯಕ ಹಾಗೂ ವೀರಭದ್ರಪ್ಪ ಸತ್ಯಂಪೇಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ

ಯಾದಗಿರಿ ಜಿಲ್ಲಾ ವರದಿಗಾರರು

ಶರಬು ಬಿ.ನಾಟೇಕಾರ್ ಅವರು 2018ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ