ಸುರಪುರ: ಇದೇ ಶುಕ್ರವಾರದಿಂದ ಬೆಂಗಳೂರಿನಲ್ಲಿ ನಡೆಯಲಿರುವ 14 ವರ್ಷದೊಳಗಿನವರ ಮಿನಿ ಒಲಿಂಪಿಕ್ಸ್‌ಗೆ ಆಯ್ಕೆಯಾದ ಖೋ ಖೋ ಆಟಗಾರರನ್ನು ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಹಿರಿಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿ, ಸ್ಪರ್ಧೆಯಲ್ಲಿ ವಿಜಯಶಾಲಿಗಳಾಗುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ವೆಂಕಟೇಶ್ ಬೇಟೆಗಾರ, ಮೌನೇಶ್ವರ ಖೋ ಖೋ ಕ್ಲಬ್ ಸ್ಥಾಪನೆಯಾದಾಗಿನಿಂದಲೂ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯ ಮತ್ತು ಅಂತರ್‌ರಾಜ್ಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಪ್ರತಿಭಾವಂತ ಕ್ರೀಡಾಪಟುಗಳು ಈ ಕ್ಲಬ್‌ನಿಂದ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಭೀಮರಾಯ್ ಮಲ್ಲಾಪುರ್ ಮಾತನಾಡಿ, ನಮ್ಮ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳಿಗೆ ಸರ್ಕಾರದಿಂದ ಪ್ರತಿಭಾವಂತ ಕ್ರೀಡಾಪಟುಗಳ ಸಹಾಯಧನದಡಿ ತಲಾ 2ರಿಂದ 3 ಲಕ್ಷ ರೂ. ನೆರವು ದೊರೆತಿದೆ. ಸುಮಾರು 10ರಿಂದ 15 ಕ್ರೀಡಾಪಟುಗಳಿಗೆ ಒಟ್ಟು 20ರಿಂದ 25 ಲಕ್ಷ ರೂ. ಧನಸಹಾಯ ಲಭಿಸಿದೆ. ಇದಕ್ಕೆ ಖೋ ಖೋ ಕ್ಲಬ್ ಅಧ್ಯಕ್ಷ ಭೀಮಣ್ಣ ದಿವಳಗುಡ್ಡ, ಶಬೀರ್ ಪಟೇಲ್ ಹಾಗೂ ಹಿರಿಯ ಕ್ರೀಡಾಪಟುಗಳ ಶ್ರಮವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದೇವೇಂದ್ರಪ್ಪ ಚಿಕ್ಕನಹಳ್ಳಿ, ಸಣ್ಣ ನಿಂಗಪ್ಪ ಮಾಸ್ಟರ್, ಮಲ್ಲಯ್ಯ ದಿವಳಗುಡ್ಡ, ಬಾಪು ಗೌಡ, ನಾಗಪ್ಪ ಚಿಕ್ಕನಹಳ್ಳಿ, ಬಲಭೀಮ ದಳವಾಯಿ, ಸುಭಾಷ್ ದೇಸಾಯಿ, ನಿಂಗಪ್ಪ ಬಾಡದ್, ನಿಂಗಪ್ಪ ದೇವದುರ್ಗ, ಸತೀಶ್ ಅಯ್ಯಪ್ಪ, ನಿಂಗೂ ನಾಯಕ್, ಅಂಜು ನಾಯಕ್, ಶೇಖಪ್ಪ, ಚಂದ್ರು, ಮೈನು ಪಟೇಲ್ ಸೇರಿದಂತೆ ಇತರರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ

ಯಾದಗಿರಿ ಜಿಲ್ಲಾ ವರದಿಗಾರರು

ಶರಬು ಬಿ.ನಾಟೇಕಾರ್ ಅವರು 2018ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ