Yadgiri | ಅಪಸ್ಮಾರ ಕುರಿತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ: ಡಾ.ಪದ್ಮಾನಂದ ಗಾಯಕ್ವಾಡ್
ಯಾದಗಿರಿ: ಅಪಸ್ಮಾರ ಕಾಯಿಲೆಯ ಕುರಿತು ಸಾರ್ವಜನಿಕರಲ್ಲಿ ಸರಿಯಾದ ಅರಿವು ಮೂಡಿಸುವುದು ಹಾಗೂ ಈ ಕಾಯಿಲೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಪದ್ಮಾನಂದ ಗಾಯಕ್ವಾಡ್ ಹೇಳಿದರು.
ಇತ್ತೀಚೆಗೆ ನಗರದ ಯಿಮ್ಸ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಅಂಗವಾಗಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ) ಹಾಗೂ ಯಿಮ್ಸ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪಸ್ಮಾರವು ಮೆದುಳಿನ ನರಕೋಶಗಳ ಅಸಹಜ ವಿದ್ಯುತ್ ಚಟುವಟಿಕೆಯಿಂದ ಉಂಟಾಗುವ ನರಸಂಬಂಧಿ ಕಾಯಿಲೆಯಾಗಿದೆ. ಹಠಾತ್ತನೆ ಪ್ರಜ್ಞೆ ತಪ್ಪುವುದು, ದೇಹದ ಅಂಗಾಂಗಗಳಲ್ಲಿ ಸೆಳೆತ ಕಾಣಿಸಿಕೊಳ್ಳುವುದು, ಕೈಕಾಲು ನಡುಗುವುದು, ದೃಷ್ಟಿ ಸ್ಥಿರವಾಗುವುದು ಹಾಗೂ ಸುತ್ತಮುತ್ತಲಿನ ಅರಿವು ಇಲ್ಲದಿರುವುದು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಈ ಕಾಯಿಲೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದು, ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧ ಸೇವಿಸುವುದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು. ಅಪಸ್ಮಾರದಿಂದ ಬಳಲುವವರನ್ನು ತಾರತಮ್ಯದಿಂದ ಕಾಣದೆ, ಕುಟುಂಬದವರು ಅವರಿಗೆ ಆತ್ಮಸ್ಥೈರ್ಯ ಮತ್ತು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಮೆದುಳು ಆರೋಗ್ಯ ಮೆಡಿಕಲ್ ಆಫೀಸರ್ ಡಾ. ವರ್ಧಮಾನ್ ಮಾತನಾಡಿ, ಅಪಸ್ಮಾರದಲ್ಲಿ ಮುಖ್ಯವಾಗಿ ಫೋಕಲ್ ಸೀಜರ್ಸ್ ಮತ್ತು ಜನರಲೈಸ್ಡ್ ಸೀಜರ್ಸ್ ಎಂಬ ಎರಡು ವಿಧಗಳಿವೆ. ಕೆಲವರಲ್ಲಿ ದೇಹದ ಒಂದು ಭಾಗದಲ್ಲಿ ಮಾತ್ರ ಸೆಳೆತ ಕಾಣಿಸಿಕೊಂಡರೆ, ಇನ್ನು ಕೆಲವರಲ್ಲಿ ಇಡೀ ದೇಹದಲ್ಲಿ ಸೆಳೆತ ಉಂಟಾಗಿ ಪ್ರಜ್ಞೆ ತಪ್ಪಬಹುದು. ಮತ್ತೆ ಕೆಲವರಲ್ಲಿ ಹೊರನೋಟಕ್ಕೆ ಸೆಳೆತ ಕಾಣಿಸದಿದ್ದರೂ ಕೆಲವು ಕ್ಷಣಗಳ ಕಾಲ ಸುತ್ತಮುತ್ತಲಿನ ಅರಿವು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಲಕ್ಷಣಗಳನ್ನು ಗುರುತಿಸಿ ತಕ್ಷಣ ಸೂಕ್ತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಮುಖ್ಯ ಎಂದು ವಿವರಿಸಿದರು.
ಮೆಡಿಸಿನ್ ವಿಭಾಗದ ವೈದ್ಯ ಡಾ. ಶರಣಬಸಪ್ಪ ಮಾತನಾಡಿ, ತಲೆಸುತ್ತು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಪ್ರತಿಯೊಂದು ತಲೆಸುತ್ತನ್ನೂ ಅಪಸ್ಮಾರವೆಂದು ಪರಿಗಣಿಸಬಾರದು. ತಲೆಸುತ್ತು ಉಂಟಾಗಲು ಹಲವು ಕಾರಣಗಳಿರುತ್ತವೆ. ಕೇವಲ ತಲೆಸುತ್ತು ಇದೆ ಎಂಬ ಕಾರಣಕ್ಕೆ ಅಪಸ್ಮಾರದ ಔಷಧ ನೀಡದೆ, ಅಗತ್ಯ ವೈದ್ಯಕೀಯ ಪರೀಕ್ಷೆಗಳ ಮೂಲಕ ನಿಖರ ಕಾರಣ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ನಾಗರತ್ನ ಅವರು ಅಪಸ್ಮಾರ ರೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಸೇವೆಗಳ ಕುರಿತು ಮಾಹಿತಿ ನೀಡಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಕಭೀ ತಂಡ, ಆರ್‌ಬಿಎಸ್‌ಕೆ ಹಾಗೂ ಯುಡಿಐಡಿ ತಂಡದ ಸದಸ್ಯರು ಮತ್ತು ರೋಗಿಗಳು ಪಾಲ್ಗೊಂಡು ಕಾಯಿಲೆಯ ಲಕ್ಷಣಗಳು, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಮಾಳಪ್ಪ ಕಾರ್ಯಕ್ರಮ ನಿರೂಪಿಸಿದರು.