Yadagiri | ಗಣೇಶ ಮೆರವಣಿಗೆ ವೇಳೆ 2 ಗುಂಪುಗಳ ಮಧ್ಯೆ ಗಲಾಟೆ: 19 ಮಂದಿಯ ವಿರುದ್ಧ ಎಫ್ಐಆರ್
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ
ಯಾದಗಿರಿ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಕಲ್ಲು ತೂರಾಟ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆದಿರುವ ಘಟನೆ ನಗರದ ವಾರ್ಡ್ ನಂ. 17 ಮತ್ತು 18ರ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಗಣೇಶ ಮೂರ್ತಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕಾಲು ಮೇಲೆ ಬೈಕ್ ಹೋಗಿದೆ ಎನ್ನುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಎನ್ನಲಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಎರಡು ಗುಂಪುಗಳ ನಡುವೆ ಮೂರು-ನಾಲ್ಕು ತಿಂಗಳ ಹಿಂದೆ ನಡೆದಿದ್ದ ಮದುವೆ ಸಮಾರಂಭವೊಂದರ ವೇಳೆ ಗಲಾಟೆ ನಡೆದಿದ್ದು, ಅಂದಿನಿಂದಲೂ ಹಳೆಯ ದ್ವೇಷ ಇತ್ತು ಎನ್ನಲಾಗಿದೆ.
ಇದೇ ವೈಮನಸ್ಸಿನ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಮತ್ತೆ ಗಲಾಟೆ ಸಂಭವಿಸಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರೊಂದಿಗೆ ಏಳು ಮಂದಿ ಯುವಕರ ತಂಡ ಕಿರಿಕ್ ತೆಗೆದು ಗಲಾಟೆ ಆರಂಭಿಸಿತು ಎನ್ನಲಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತು ಬೊಬ್ಬೆ ಹಾಕಿ, ತಮ್ಮ ಏರಿಯಾದಲ್ಲಿ ತಾವು ಹೇಳಿದಂತೆ ನಡೆಯಬೇಕು ಎಂದು ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ.
ಗಲಾಟೆ ವೇಳೆ ಕಲ್ಲುತೂರಾಟ ನಡೆದಿದ್ದು, ದೊಣ್ಣೆಗಳಿಂದಲೂ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 19 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಿದ್ದು, ಗಲಾಟೆ ನಡೆದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.