ಯಾದಗಿರಿ: ರೈತರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಸೋಮವಾರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯಲ್ಲಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹಾಗೂ ಎಸ್‌ಪಿ ಪೃಥ್ವಿಕ್ ಶಂಕರ್ ಅವರು ರೈತ ಮುಖಂಡರೊಂದಿಗೆ ಸುಮಾರು 40 ನಿಮಿಷಗಳ ಕಾಲ ಸಭೆ ನಡೆಸಿದರು.
ಸಭೆಯ ಆರಂಭದಲ್ಲಿ ರೈತ ಮುಖಂಡರಾದ ಮಹೇಶಗೌಡ ಸುಬೇದಾರ, ಮಲ್ಲಣ್ಣ ಪರಿವಾಣ, ಶರಣಬಸವ ಸ್ವಾಮಿ ಬದ್ದೆಪಲ್ಲಿ ಹಾಗೂ ವಿಜಯಕುಮಾರ ಅವರು ರೈತರ ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು.
ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ವಾಸ್ತವ ಸ್ಥಿತಿಯ ಮಾಹಿತಿ ಪಡೆದುಕೊಂಡರು. ಬಳಿಕ ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲಾಡಳಿತದಿಂದ ಸಾಧ್ಯವಾದ ಮಟ್ಟಿಗೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಲ್ಕಪ್ಪನಹಳ್ಳಿ ಮತ್ತು ಬದ್ದೆಪಲ್ಲಿ ಗ್ರಾಮಗಳಿಗೆ ಬೋರ್‌ವೆಲ್ ಒದಗಿಸುವುದು ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆಯೂ ರೈತ ಮುಖಂಡರು ಅಧಿಕಾರಿಗಳ ಗಮನ ಸೆಳೆದರು.
ಧರಣಿ ಹಿಂಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ, ಮಂಗಳವಾರ ನಡೆಯುವ ಸಭೆಯ ಫಲಿತಾಂಶದ ಬಳಿಕ ಪ್ರತಿಭಟನಾಕಾರರ ಸಮ್ಮುಖದಲ್ಲೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ರೈತ ಮುಖಂಡ ಮಹೇಶಗೌಡ ಸುಬೇದಾರ ತಿಳಿಸಿದರು. ಬಳಿಕ ಸಭೆ ಮುಕ್ತಾಯಗೊಂಡಿತು.