×
Ad

Yadgir | ಎಸೆಸೆಲ್ಸಿ ಪರೀಕ್ಷೆ-2 ಹಿನ್ನೆಲೆ : ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

Update: 2026-05-16 18:05 IST

ಯಾದಗಿರಿ: ಯಾದಗಿರಿ ಜಿಲ್ಲಾಡಳಿತ ವತಿಯಿಂದ ಜಿಲ್ಲೆಯಾದ್ಯಂತ 2026ರ ಮೇ 18ರಿಂದ 23ರವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆ-2 ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.

ಬಿ.ಎನ್.ಎಸ್.ಎಸ್. 2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಲಾಗಿದ್ದು, ಮೇ 18, 19, 20, 21, 22 ಹಾಗೂ 23ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ.

ಗುರುಮಠಕಲ್ ತಾಲೂಕಿನ 4, ಶಹಾಪೂರ ಹಾಗೂ ವಡಗೇರಾ ತಾಲೂಕಿನ 6, ಸುರಪುರ ಹಾಗೂ ಹುಣಸಗಿ ತಾಲೂಕಿನ 3 ಸೇರಿದಂತೆ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ದಿನಗಳಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಿತ ಚಟುವಟಿಕೆಗಳು :

ಎಸ್‌ಟಿಡಿ, ಮೊಬೈಲ್, ಬ್ಲೂಟೂತ್ ಡಿವೈಸ್, ಡಿಜಿಟಲ್ ವಾಚ್, ಪೇಜರ್, ವೈರಲೆಸ್ ಉಪಕರಣ ಬಳಕೆ. ಝೆರಾಕ್ಸ್, ಟೈಪಿಂಗ್ ಹಾಗೂ ಪುಸ್ತಕ ಮಳಿಗೆಗಳ ಕಾರ್ಯಾಚರಣೆ. ಅನಧಿಕೃತ ವ್ಯಕ್ತಿಗಳ ಪರೀಕ್ಷಾ ಕೇಂದ್ರ ಪ್ರವೇಶ. ಮಾರಕಾಸ್ತ್ರ ಹಿಡಿದು ಸಂಚರಿಸುವುದನ್ನು ನಿಷೇಧಿಸಲಾಗಿದೆ

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಬೆರಳಚ್ಚು ಕೇಂದ್ರ, ಝೆರಾಕ್ಸ್ ಮತ್ತು ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಮದುವೆ, ಶವಸಂಸ್ಕಾರ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಾದಗಿರಿಯ ಲಿಂಗೇರಿ ಕೋನಪ್ಪ ಆರ್. ನಾಡಗೌಡ ಸ್ಮಾರಕ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ಸಮೀಪ ಇರುವ ಭಾಗ್ಯಲಕ್ಷ್ಮೀ ಚಿತ್ರಮಂದಿರದಲ್ಲಿ ಅಂದು ಯಾವುದೇ ಚಲನಚಿತ್ರ ಪ್ರದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News