Yadgiri | ವಿದ್ಯುತ್ ಕಂಬಕ್ಕೆ ಬೊಲೆರೋ ವಾಹನ ಢಿಕ್ಕಿ : ಮೂವರು ಸ್ಥಳದಲ್ಲೇ ಮೃತು, 8 ಮಂದಿಗೆ ಗಂಭೀರ ಗಾಯ

Update: 2026-08-23 17:14 IST

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದ ಬಳಿ ಭಾನುವಾರ ನಡೆದಿದೆ.

ಮೃತರನ್ನು ಭಾಗ್ಯಶ್ರೀ (35), ಸತ್ಯಮ್ಮ (30) ಹಾಗೂ ಹೊನ್ನಿಂಗಮ್ಮ (18) ಎಂದು ಗುರುತಿಸಲಾಗಿದೆ.

ಮಡ್ನಾಳ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಹತ್ತಿ ಕಸ ತೆಗೆಯುವ ಕೂಲಿ ಕೆಲಸ ಮುಗಿಸಿಕೊಂಡು ಕಾರ್ಮಿಕರು ಬೊಲೆರೋ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಮಾಹಿತಿ ತಿಳಿದು ಭೀ.ಗುಡಿ ಪೊಲೀಸ್ ಠಾಣೆಯ ಪಿಎಸ್‌ಐ ದೇವಿಂದ್ರರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News