Yadgiri | ನೀಟ್ ಅಕ್ರಮ ಖಂಡಿಸಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಪ್ರಧಾನಮಂತ್ರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ದಲಿತ ಸಂಘರ್ಷ ಸಮಿತಿ
ಯಾದಗಿರಿ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡ ಶಿವಪುತ್ರ ಜವಳಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿ ಜಂತರ್-ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸಬೇಕು. ಧರ್ಮೇಂದ್ರ ಪ್ರಧಾನ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಚಂದಪ್ಪ ಮುನಿಯಪ್ಪನವರ್, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಪೂಜಾರಿ ಕುರುಕುಂದ, ದೊಡ್ಡಪ್ಪ ಕಾಡಿಂಗೇರ, ದೇವು ಹುಲಕಲ್, ಶರಣಪ್ಪ ಮಾಲಹಳ್ಳಿ, ಶರಬಣ್ಣ ದೋರನಹಳ್ಳಿ, ತಾಯಪ್ಪ ಭಂಡಾರಿ, ಭೀಮಶಂಕರ ಗುಂಡಹಳ್ಳಿ, ರಂಗಸ್ವಾಮಿ ಕೊಂಕಲ್, ಶರಣಪ್ಪ ಕುರುಕುಂದಿ, ಎಂ ಪಟೇಲ್, ಸಂತೋಷ್, ನಾಗರಾಜ್, ಚನ್ನಪ್ಪ ದೇವಪುರ, ವೆಂಕಟೇಶ ದೇವಪುರ, ಖಾಜಾ ಅಜ್ಮೀರ್, ಹನುಮಂತ ದೇವಪುರ, ಹೊನ್ನಪ್ಪ ಕುರಕುಂದಿ, ದಶರಥ ಗುಂಡಳ್ಳಿ, ಮಲ್ಲಪ್ಪ ಗುಂಡಳ್ಳಿ, ಚಂದ್ರು, ನಿಂಗಪ್ಪ ಖಾನಾಪುರ, ಸೇರಿದಂತೆ ನೂರಾರು ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.