ಯಾದಗಿರಿ: ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಜಾರಿಯಲ್ಲಿರುವ ವಾರಬಂಧಿ ಪದ್ಧತಿಯನ್ನು ರದ್ದುಪಡಿಸಿ, ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮುನಾಯಕ, ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಗಳಿಗಾಗಿ ಕಾಲುವೆ ನೀರನ್ನೇ ಪ್ರಮುಖವಾಗಿ ಅವಲಂಬಿಸಿದ್ದಾರೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ವಾರಬಂಧಿ ಪದ್ಧತಿಯಿಂದ ರೈತರಿಗೆ ಸಮರ್ಪಕವಾಗಿ ನೀರು ದೊರೆಯದೆ, ಬೆಳೆಗಳ ಬೆಳವಣಿಗೆಗೆ ತೊಂದರೆಯಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.

ಈ ಭಾಗದ ರೈತರು ಈಗಾಗಲೇ ಹಲವು ಕೃಷಿ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲುವೆಗಳಿಗೆ ವಾರಬಂಧಿ ಪದ್ಧತಿಯನ್ನು ಮುಂದುವರಿಸುವುದರಿಂದ ಬೆಳೆಗಳಿಗೆ ಅಗತ್ಯವಿರುವ ಸಮಯದಲ್ಲಿ ನೀರು ಸಿಗದೆ ರೈತರು ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು, ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು. 2026ರಲ್ಲಿ ನಮ್ಮ ಭಾಗದ ರೈತರಿಗೆ ಸಮರ್ಪಕವಾಗಿ ನೀರು ನೀಡದೆ, ರಾತ್ರೋರಾತ್ರಿ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ನೀರು ಹರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ರೈತರ ಬೆಳೆಗಳನ್ನು ಉಳಿಸಿ, ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಅನ್ನದಾತರ ಬದುಕಿಗೆ ಭದ್ರತೆ ಒದಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ ಸಭೆ ನಡೆಸಿ, ರೈತರಿಗೆ ಅನುಕೂಲವಾಗುವ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಮುಂಗಾರು ಮಳೆಯೂ ಕೈಕೊಟ್ಟಿದೆ. ಇದರಿಂದ ಜಿಲ್ಲೆಯ ರೈತರು ಸಾಲದ ಭಾರಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವಾರಬಂಧಿ ಪದ್ಧತಿಯನ್ನು ಜಾರಿಯಲ್ಲಿಟ್ಟರೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾರಿಯಲ್ಲಿರುವ ವಾರಬಂಧಿ ಪದ್ಧತಿಯನ್ನು ರದ್ದುಪಡಿಸಿ, ಕಟಾವಿನ ಹಂತಕ್ಕೆ ಬಂದಿರುವ ಭತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಇತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಬೇಕು. ಬರಪೀಡಿತ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು. ರೈತರ ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಜ ಹೊನಗೇರಾ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಅಂಬ್ರೀಶ ಕಟ್ಟಿಮನಿ, ಮೌನೇಶ ಮಾಧ್ವಾರ, ಸಿದ್ದಪ್ಪ ಕೂಯಿಲೂರು, ಅಶೋಕ ನಾಯಕ, ಸುರೇಶ ಬೆಳಗುಂದಿ, ನಾಗರಾಜ ಶೇಟಗೇರಾ, ಹಣಮಗೌಡ ಶಖಾಪೂರ, ಮೋನೇಶ ಚಿಂಚೋಳಿ, ಹುಸ್ಮಾನ್ ಪಟೇಲ್, ಸುರೇಶ ಬಾಡದ, ಶಿವರಾಜ ನಾಡಗೌಡ, ಲಕ್ಷ್ಮಣ ಕೂಡ್ಲೂರು, ಸಾಬು ನೀಲಹಳ್ಳಿ, ನಾಗರಡ್ಡಿ ಕೂಡ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor