×
Ad

Yadgiri | ರೈತರಿಗೆ ಬೆಳೆ ವಿಮೆ ಲಾಭ ತಲುಪಿಸಲು ವಿಶೇಷ ಗಮನ ನೀಡಿ: ಡಿಸಿ ರಾಹುಲ್ ಪಾಂಡ್ವೆ

Update: 2026-06-23 18:32 IST

ಯಾದಗಿರಿ: ರೈತರಿಗೆ ಬೆಳೆ ವಿಮೆ ಯೋಜನೆಗಳ ಲಾಭ ಸಮರ್ಪಕವಾಗಿ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಬೆಳೆ ವಿಮೆ, ಹತ್ತಿ ಬೆಳೆ ಉತ್ಪಾದಕತೆ ಹಾಗೂ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ರೈತರಿಗೆ ವಿಮೆ ಯೋಜನೆಗಳ ಲಾಭ ದೊರೆಯುವಂತೆ ತಾಲೂಕು, ಹೋಬಳಿ ಹಾಗೂ ಕ್ಷೇತ್ರವಾರು ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಬೇಕು. ಈ ಬಾರಿ ಮುಂಗಾರು ಕುಂಠಿತದಿಂದ ರೈತರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಳೆ ಹಾನಿಗೆ ಸಂಬಂಧಿಸಿದ ವಿಮೆ ಮೊತ್ತ ಸಕಾಲದಲ್ಲಿ ಪಾವತಿಯಾಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಈ ಕುರಿತು ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮೆ ಕಂಪನಿಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಬೆಳೆ ಕಟಾವು ಸಮೀಕ್ಷೆಯಲ್ಲಿ ಯಾವುದೇ ದೂರುಗಳು ಬರದಂತೆ ಕೃಷಿ ಇಲಾಖೆ, ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ತಂಡ ರಚಿಸಿ ಕ್ಷೇತ್ರವಾರು ನಿಗಾವಹಿಸುವಂತೆ ಸೂಚಿಸಿದರು. ತುಂತುರು ಮತ್ತು ಹನಿ ನೀರಾವರಿ ಯೋಜನೆಗಳಡಿ ಅರ್ಹ ರೈತರಿಗೆ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಹತ್ತಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಿ, ಗುಣಮಟ್ಟದ ಬೀಜ ಪೂರೈಕೆಯ ಮೇಲೂ ನಿಗಾವಹಿಸಬೇಕು. ಗುಚ್ಛ ಪ್ರಾತ್ಯಕ್ಷಿಕೆ, ಉತ್ಪಾದಕತೆ ಅಭಿಯಾನ ಹಾಗೂ ಬೆಳೆ ನಿರ್ವಹಣೆ ಕುರಿತು ಅರಿವು ಮೂಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ್ ಮಾತನಾಡಿ, 2026-27ನೇ ಸಾಲಿನ ಹತ್ತಿ ಬೆಳೆ ಉತ್ಪಾದಕತೆ ಯೋಜನೆಯಡಿ ಅಧಿಕ ಸಾಂದ್ರತೆಯಲ್ಲಿ ಹತ್ತಿ ಬೆಳೆದು ಉತ್ಪಾದನೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.

ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತರಿಗೆ ಘಟಕಗಳ ವಿತರಣೆ ಹಾಗೂ ಯೋಜನೆ ಅನುಷ್ಠಾನದ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

2026-27ನೇ ಸಾಲಿನ ಬೆಳೆ ವಿಮೆ ಅಧಿಸೂಚನೆ ಸರ್ಕಾರದಿಂದ ಹೊರಡಿಸಲಾಗಿದ್ದು, ಜಿಲ್ಲೆಯ ರೈತರ ನೋಂದಣಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆ ಕುರಿತು ವ್ಯಾಪಕ ಪ್ರಚಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಬೆಳೆ ವಿಮೆ ಐಚ್ಛಿಕವಾಗಿದ್ದು, ಆಸಕ್ತ ರೈತರು ಸಮೀಪದ ಬ್ಯಾಂಕ್‌ಗಳು, ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News