Yadgiri | ಎಸ್‌ಸಿ, ಎಸ್‌ಟಿ ನೌಕರರ ಹಕ್ಕುಗಳ ರಕ್ಷಣೆಗೆ ಆ.28ರಂದು ಬೆಂಗಳೂರಿನಲ್ಲಿ ಐಕ್ಯತಾ ಸಮಾವೇಶ

Update: 2026-08-18 18:58 IST

ಯಾದಗಿರಿ: ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಆಗಸ್ಟ್ 28ರಂದು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್‌ನಲ್ಲಿ ರಾಜ್ಯಮಟ್ಟದ 6ನೇ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ. ಶಿವಶಂಕರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಸಿ/ಎಸ್ಟಿ ಸರ್ಕಾರಿ ನೌಕರರಿಗೆ ತಾರತಮ್ಯವಾಗುತ್ತಿದೆ. ನೌಕರರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಎಲ್ಲರೂ ಐಕ್ಯತೆಯಿಂದ ಒಂದೇ ವೇದಿಕೆಯಲ್ಲಿ ಸೇರುವುದು ಅಗತ್ಯವಾಗಿದೆ ಎಂದರು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ 7.75 ಲಕ್ಷ ಹುದ್ದೆಗಳ ಪೈಕಿ ಸುಮಾರು 4 ಲಕ್ಷ ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಸುಮಾರು 24 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಎಸ್ಸಿ/ಎಸ್ಟಿ ನೌಕರರಿಗೆ ಮೀಸಲಾತಿಯ ಪೂರ್ಣ ಪ್ರಯೋಜನ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಆಗಸ್ಟ್ 28ರಂದು ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಸಚಿವರು, ಶಾಸಕರು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಪ್ರಗತಿಪರ ಸ್ವಾಮೀಜಿಗಳು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಆರ್.ಎಂ. ನಾಟೇಕಾರ್ ಮಾತನಾಡಿ, ಯಾದಗಿರಿ ಜಿಲ್ಲೆಯಿಂದ ಸಮಾವೇಶಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಆರ್‌.ಮೋಹನ, ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್, ಶಹಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಾಂಬ್ಳೆ, ಸುರಪುರ ತಾಲ್ಲೂಕು ಅಧ್ಯಕ್ಷ ಸಂಜೀವ್ ದರ್ಬಾರಿ, ಸಾವಿತ್ರಮ್ಮ ಸೇರಿದಂತೆ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News