ಯು.ಟಿ.ಖಾದರ್ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ: ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್
"ಶಾರದಾ ಮಾತೆ ರಸ್ತೆಯಲ್ಲೇ ಉಳಿಯಲು ಕೆಲ ಯುವಕರ ಗೂಂಡಾ ವರ್ತನೆ ಕಾರಣ"
ಉಳ್ಳಾಲ: ಕೆಲ ಯುವಕರ ಗೂಂಡಾ ವರ್ತನೆಯಿಂದಾಗಿ ಪವಿತ್ರ ಶಾರದಾ ಮಾತೆಯನ್ನು ರಸ್ತೆಯಲ್ಲೇ ಉಳಿಸುವಂತೆ ಮಾಡಲಾಗಿದೆ. ಘಟನೆಗೆ ಸ್ಪೀಕರ್ ತಕ್ಷಣ ಸ್ಪಂಧಿಸಿದ್ದು, ಪೊಲೀಸ್ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ಕ್ಷಮೆಯನ್ನು ಯಾಚಿಸಿರುವುದನ್ನು ತಿಳಿಸಿರುತ್ತಾರೆ. ಉಳ್ಳಾಲದ ಪ್ರತಿಯೊಂದು ವಾರ್ಡುಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುವಂತಹ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ ಎಂದು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಾರದೋತ್ಸವದ ವೇಳೆ ಉಂಟಾದ ವಿವಾದದ ಹಿನ್ನೆಲೆ, ಉಳ್ಳಾಲ ಶಾರದೋತ್ಸವ ಸಮಿತಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಪರಿಸ್ಥಿತಿ ಸರಿಪಡಿಸುವ ಕುರಿತು ತೀರ್ಮಾನ ಕೈಗೊಂಡಿವೆ.
ಉಳ್ಳಾಲ ಶಾಸಕ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು, “ಕಾಂಗ್ರೆಸ್ ಪಕ್ಷದ ಹಿಂದೂ ಮುಖಂಡರು ಬ್ಲಾಕ್ ಕಚೇರಿಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು” ಎಂದು ಸೂಚಿಸಿದ್ದರು. ಜೊತೆಗೆ ಸಭಾಧ್ಯಕ್ಷರು ತಕ್ಷಣವೇ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಲ ಗೂಂಡಾ ಸ್ವಭಾವದ ವ್ಯಕ್ತಿಗಳಿಂದಾಗಿ ಶಾರದಾ ಮಾತೆಯ ವಿಗ್ರಹವನ್ನು ರಸ್ತೆಯಲ್ಲೇ ಉಳಿಸುವ ಘಟನೆ ನಡೆದಿದೆ. ಈ ಘಟನೆಯನ್ನು ರಾಜಕೀಯ ಬೇಳೆ ಮಾಡಲು ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಸಕರು ಮತ್ತು ಸ್ಪೀಕರ್ ಆಗಿರುವ ಖಾದರ್ ಅವರು ಮಾಡಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಪೊಲೀಸ್ ಆಯುಕ್ತರೂ ತಮ್ಮ ಅಧಿಕಾರಿಗಳ ಪರವಾಗಿ ಪತ್ರಿಕಾ ಹೇಳಿಕೆಯ ಮೂಲಕ ಕ್ಷಮೆಯಾಚಿಸಿದ್ದಾರೆ ಎಂದರು.
ಬಿಜೆಪಿಯ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ವಕೀಲರಾದ ಮೋಹನ್ ರಾಜ್ ಕೆ.ಆರ್ ಇವರಿಗೆ ಅನುಭವದ ಕೊರತೆಯಿದೆ. ಉಳ್ಳಾಲದ ಪ್ರತಿಯೊಂದು ವಾರ್ಡ್‌ನಲ್ಲಿ ಜನರು ಖಾದರ್ ಅವರ ಅಭಿವೃದ್ಧಿ ಕಾರ್ಯ ವನ್ನು ಮೆಚ್ಚಿ ಅಭಿನಂದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಮೋಹನ್ ರಾಜ್ ಮಾತನಾಡಿರುವುದು ಮತಿಭ್ರಮಣೆ ಆಗಿರುವ ಲಕ್ಷಣ ಎಂದು ವ್ಯಂಗ್ಯವಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಉಳ್ಳಾಲದ ದಸರಾದಲ್ಲಿ ಎಲ್ಲರೂ ಸೇರಿ ಕೊಂಡು 78 ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದೇವೆ. ಇಂದಿನವರೆಗೂ ಎಂದಿಗೂ ರಾಜಕೀಯ ಮಾಡಿಲ್ಲ. ಆಯೋಜಕರು ಪರವಾನಿಗೆಯನ್ನು 1 ಗಂಟೆಯವರೆಗೆ ಮಾತ್ರ ಪಡೆದುಕೊಂಡಿದ್ದಾರೆ. ಆದರೂ ಪೊಲೀಸರು ಶಬ್ದವನ್ನು ಮಾತ್ರ ತಡೆಹಿಡಿದಿದ್ದಾರೆ. ಅದನ್ನೇ ನೆಪವನ್ನಾಗಿಸಿ ಗೂಂಡಾ ಪ್ರವೃತ್ತಿಯವರ ಕೃತ್ಯ ಪೊಲೀಸರ ಕರ್ತವ್ಯವನ್ನು ಅಡ್ಡಿಪಡಿಸಿದೆ. ಉತ್ಸವ ಸಂದರ್ಭ ತಪ್ಪೇ ಆಗಿದ್ದಲ್ಲಿ ಆಯೋಜಕರು ಪೊಲೀಸರ ವಿರುದ್ಧ ಆಯುಕ್ತರಿಗೆ ದೂರು ನೀಡಬೇಕಾಗಿತ್ತು. ಅದನ್ನು ಈವರೆಗೆ ಮಾಡಿಲ್ಲ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಉಳ್ಳಾಲಗುತ್ತು ಮಾತನಾಡಿ, 30ಮಂದಿಯ ಮೇಲೆ ಎಫ್‌ಐಆರ್ ಆಗಿದ್ದನ್ನು ನಿಲ್ಲಿಸಿದ್ದು ಸ್ಪೀಕರ್ ಆಗಿದ್ದಾರೆ. ಬಿಜೆಪಿಯವರು ಸುಮ್ಮನೆ ಅವರನ್ನು ದೂರುತ್ತಾ ಕೂರುವು ದಲ್ಲ. ಯಶವಂತ್ ಅಮೀನ್ ಸಹಿತ ಇತರರು ಠಾಣೆಗೆ ಹೋಗಿ ಕೇಸು ದಾಖಲಿಸಬೇಡಿ ಎಂದಾಗ ಇನ್ಸ್ಪೆಕ್ಟರ್ ಒಪ್ಪಿದ್ದಾರೆ. ನೀವು ಮಾತ್ರ ಹಿಂದೂಗಳಲ್ಲ, ನಾವು ಕೂಡಾ ಒಂದೊಂದು ದೇವಸ್ಥಾನಗಳಲ್ಲಿ ಜವಾಬ್ದಾರಿಯಲ್ಲಿ ಇರುವವರು. ಸಾರ್ವಜನಿಕ ಕಾರ್ಯಕ್ರಮಕ್ಕೆ ಸಮಯದ ಮಿತಿ ಇರಬಾರದು ಎಂದರು.
ಸುದ್ಧಿಗೋಷ್ಠಿಯಲ್ಲಿ ಸೋಮೇಶ್ವರ ಪುರಸಭೆ ಸದಸ್ಯ, ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನಿ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ ಸನಿಲ್ , ಮನ್ಸೂರ್ ತೊಕ್ಕೊಟ್ಟು ಉಪಸ್ಥಿತರಿದ್ದರು.