ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಬೇಡಿಕೆಗೆ ಅನುಗುಣವಾಗಿ ಯೋಜನೆ: ಸಚಿವ ಮಂಕಾಳ ವೈದ್ಯ
ಆಧುನೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಮಂಗಳೂರು, ಡಿ.6: ದೇಶದ ಸಮುದ್ರ ತಟದಲ್ಲಿರುವ 16 ರಾಜ್ಯಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಮೀನುಗಾರರ ಬೇಡಿಕೆಗಳು ಏನೇನು ಅಂತ ತಿಳಿದುಕೊಂಡು ಯೋಜನೆ ರೂಪಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮೀನುಗಾರಿಕಾ ಬಂದರಿನ ವ್ಯವಸ್ಥೆಗಳಿಗೆ ಪೂರಕವಾಗಿ ಸಹಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಶನಿವಾರ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರು ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾಮಗಾರಿಯನ್ನು 37.47 ಕೋ.ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಬಂದರಿನ 3ನೇ ಹಂತದ ವಿಸ್ತರಣೆ ಕಾಮಗಾರಿ 2014ರಲ್ಲಿ ಆರಂಭಗೊಳ್ಳಬೇಕಿತ್ತು. ಇದೀಗ 49.50 ಕೋ. ರೂ. ವೆಚ್ಚದಲ್ಲಿ ಆರಂಭಗೊಂಡಿವೆ. ಈ ಎರಡೂ ಕಾಮಗಾರಿ ಪೂರ್ಣಗೊಂಡರೆ ಮಂಗಳೂರು ಬಂದರಿನ ಶೇ.25ರಷ್ಟು ಸಮಸ್ಯೆಗಳು ಬಗೆಹರಿಯಲಿವೆ. ಉಳಿದ ಶೇ.75ರಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಮಂಕಾಳ ವೈದ್ಯ ನುಡಿದರು.
ಮೀನುಗಾರರು ಬೇರೆ ರಾಜ್ಯಗಳ ಗಡಿ ದಾಟಿದರೆ ಬೋಟ್ ಗಳನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೇಂದ್ರ ಸರಕಾರ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಮೀನುಗಾರರಿಗೆ ನೆರವು ನೀಡಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೀನುಗಾರರಿಗೆ ಕರ ರಹಿತ ಡೀಸೆಲ್ ನೀಡಲಾಗುತ್ತಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಲೀಟರ್ಗೆ 35 ರೂ. ದರದಲ್ಲಿ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಮೀನುಗಾರಿಕೆ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 24 ಗಂಟೆಯೊಳಗೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಆದಾಯ ದ್ವಿಗುಣಕ್ಕೆ ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಮಂಗಳೂರು ಬಂದರು ಅಭಿವೃದ್ಧಿ ಯೋಜನೆಯಲ್ಲದೆ ಕುಳಾಯಿ ಜೆಟ್ಟಿನಿರ್ಮಾಣಕ್ಕೆ 196 ಕೋ. ರೂ. ಒದಗಿಸಲಾಗಿದೆ. ಆ ಪೈಕಿ ಕೇಂದ್ರ ಸರಕಾರ 186 ಕೋ. ರೂ. ಮತ್ತು ರಾಜ್ಯ ಸರಕಾರ 10 ಕೋ. ರೂ. ನೀಡಿದೆ. ಮುಂದಿನ ಹಂತದಲ್ಲಿ ಮಂಗಳೂರು ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ಮತ್ತು ಲಕ್ಷದ್ವೀಪ ಜೆಟ್ಟಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಿದೆ. ಮೀನುಗಾರಿಕೆ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲು ಮೆರಿಟೈಮ್ ಬೋರ್ಡ್ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರಿಕಾ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬಂದರಿನ ಆಧುನೀಕರಣ ಕಾಮಗಾರಿ ಮೂಲಕ ಮೀನುಗಾರರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವಾಗುತ್ತಿದೆ. ಮೀನುಗಾರು ಇಂಧನಗಳ ಮೇಲೆ ಅವಲಂಬಿತರಾಗಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲು ಸಮುದ್ರ ಕಳೆ (ಸೀವಿಡ್) ಬೆಳೆಸಲು ಉತ್ತೇಜನ ನೀಡಬೇಕು. ಸೀ ಆ್ಯಂಬುಲೆನ್ಸ್ ಶೀಘ್ರ ಕಾರ್ಯಗತವಾಗಬೇಕು. ಮೀನುಗಾರಿಕಾ ಇಲಾಖೆಯೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು ಎಂದು ಆಗ್ರಹಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್, ಮೀನುಗಾರ ಮುಖಂಡರಾದ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ, ಅನಿಲ್ ಕುಮಾರ್, ವರದರಾಜ್ ಉಪಸ್ಥಿತರಿದ್ದರು.
ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಸ್ವಾಗತಿಸಿದರು. ಮಲ್ಪೆಮೀನುಗಾರಿಕಾ ಬಂದರುಗಳು ಅಪರ ನಿರ್ದೇಶಕ ಸಿದ್ದಯ್ಯ ಡಿ. ವಂದಿಸಿದರು. ಪುತ್ತೂರಿನ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಂಜುಳಾ ಶ್ರೀ ಶೆಣೈ ವಂದಿಸಿದರು.