ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯಲ್ಲಿ ಕುಸಿತ: ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅಸಮಾಧಾನ
ಮಂಗಳೂರು, ಮಾ.7: ಬಂಟ್ವಾಳದ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತುಂಬಾ ಕಡಿಮೆ ಆಗುತ್ತಿದೆ. ತಿಂಗಳಿಗೆ ನಾಲ್ಕರಿಂದ ಐದಷ್ಟೇ ಆಗುತ್ತಿದ್ದು, ಇದು ಉತ್ತಮ ಸಂದೇಶವಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಶನಿವಾರ ಜಿಲ್ಲಾ ಪಂಚಾಯತ್‌ನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಂದ ಅಹವಾಲು ಸ್ವೀಕರಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದಿಗೋಷ್ಟಿಯಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರ ಹುದ್ದೆ ಖಾಲಿ ಇದೆ. ಹಾಗಾಗಿ ಅಲ್ಲಿ ಸಹಜ ಹೆರಿಗೆಗೆ ಯಾರೂ ಬರುತ್ತಿಲ್ಲ, ಬದಲಾಗಿ ಮಂಗಳೂರಿನ ಲೇಡಿಗೋಶನ್‌ಗೆ ಹೋಗುತ್ತಾರೆಂಬ ಕಾರಣ ನೀಡಲಾಗಿದೆ. ಆದರೆ ಬಂಟ್ವಾಳದಿಂದ ಸುಮಾರು 25 ಕಿ.ಮೀ. ದೂರದ ಮಂಗಳೂರಿನ ಲೇಡಿಗೋಶನ್‌ಗೆ ಹೆರಿಗೆಗಾಗಿ ಗರ್ಭಿಣಿ ಯರು ಬರಬೇಕಾಗುತ್ತದೆ. ಅಗತ್ಯ ವೈದ್ಯರು , ವ್ಯವಸ್ಥೆಯನ್ನು ತಾಲೂಕು ಆಸ್ಪತ್ರೆಗಳಲ್ಲಿ ಒದಗಿಸಿದರೆ ಜನ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದಾಗ, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕಾವೂರು ಪೊಲೀಸ್ ಠಾಣಾಧಿಕಾರಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವುದಲ್ಲದೆ, ಮಹಿಳೆಯರ ಉಡುಪಿನ ಮೇಲೂ ಕಾಮೆಂಟ್ ಮಾಡುತ್ತಾರೆ ಎಂಬ ದೂರು ವ್ಯಕ್ತವಾಗಿದ್ದು, ಈ ಬಗ್ಗೆ ಸಭೆಯಲ್ಲಿದ್ದ ಎಸಿಪಿಯನ್ನು ವಿಚಾರಿಸಿ ದಾಗ ಅವರು ನೋಟೀಸು ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾ ಗಿದೆ. ಮಹಿಳಾ ಸ್ನೇಹಿ ವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಇರಬೇಕು. ಲಿಂಗ ಸೂಕ್ಷ್ಮತೆಯ ಬಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮನವರಿಕೆ ಮಾಡಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಂತಹ ಪ್ರಕರಣಗಳ ಸಂದರ್ಭ ವರಿಷ್ಟ ಅಧಿಕಾರಿಗಳ ಬಳಿ ಹೋಗಬೇಕು. ಜಿಲ್ಲೆಯಲ್ಲಿ ಕಾರ್ಯಾಚರಿಸುವ ದಕ್ಷ ಅಧಿಕಾರಿಗಳು ಇಂತಹದ್ದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಹಲವು ಬಾರಿ ಇಂತಹ ಪ್ರಕರಣಗಳು ಅವರ ಗಮನಕ್ಕೆ ಬಂದಿರುವುದಿಲ್ಲ ಎಂದು ಅವರು ಹೇಳಿದರು.
ಕೋಟೆಕಾರು ಮಡ್ಯಾರಿನ ಹಿಂದುಳಿದ ವರ್ಗಗಳ ವಸತಿ ನಿಲಯದಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ 100 ರೂ. ವ್ಯಯಿಸಬೇಕಾಗುತ್ತದೆ ಎಂಬ ದೂರು ವ್ಯಕ್ತವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದರು.
ಒಣಮೀನು ಮಾರಾಟಗಾರ ಮಹಿಳೆಯರಿಗೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಹವಾನಿಯಂತ್ರಿತ ಮಾರುಕಟ್ಟೆಯಲ್ಲಿ ಜಾಗದ ಕೊರತೆ, ಬಾಡಿಗೆ ದುಬಾರಿಯ ದೂರು ಬಂದಿದೆ. ಮಾರುಕಟ್ಟೆಗಳು ಅದೆಷ್ಟು ಸುವ್ಯವಸ್ಥಿತ, ಹವಾನಿಯಂತ್ರಿತವಾಗಿದ್ದರೂ ಅದನ್ನು ಬಳಕೆ ಮಾಡುವವರಿಗೆ ಅದು ಹೊಂದಿಕೆಯಾಗಬೇಕು, ಸಬ್ಸಿಡಿ ದರದಲ್ಲಿ ದೊರೆಯಬೇಕು. ಅದಲ್ಲದೆ ಹಾಲಿ ಒಣ ಮೀನು ಮಾರುಕಟ್ಟೆ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು ಅದಕ್ಕೆ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ಈ ಬಗ್ಗೆ ಪಾಲಿಕೆಯ ಆಯುಕ್ತರು ಕ್ರಮ ವಹಿಸುವುದಾಗಿ ತಿಳಿಸಿದ್ದು, ಕೈಗೊಳ್ಳುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಡಾ. ನಾಗಲಕ್ಷ್ಮಿ ಹೇಳಿದರು.
ಇಂದು ಸುಮಾರು 50ರಷ್ಟು ಅಹವಾಲುಗಳುಸಲ್ಲಿಕೆಯಾಗಿದ್ದು, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ 38 ದೂರುಗಳು ಬಂದಿದ್ದು, ಎಲ್ಲದಕ್ಕೂ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಬಜೆಟ್‌ನಲ್ಲಿ ಮಹಿಳಾ ಪರ ಬೇಡಿಕೆಗಳು ಈಡೇರಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮಿ ಚೌಧರಿ, ಮಹಿಳಾ ಆಯೋಗಕ್ಕೆ ಕಾಲ್ ಸೆಂಟರ್‌ನ ಬೇಡಿಕೆ ಇರಿಸಲಾಗಿತ್ತು. ಸಂತ್ರಸ್ತೆ ತಾನಿರುವ ಸ್ಥಳದಲ್ಲೇ ಆಯೋಗದ ಕಾಲ್ ಸೆಂಟರ್‌ಗೆ ದೂರು ನೀಡುವ ವ್ಯವಸ್ಥೆ ಹಾಗೂ ದೂರು ಯಾವ ಹಂತದಲ್ಲಿದೆ ಎಂಬುದನ್ನು ಆಕೆ ಖುದ್ದು ಗಮ ನಿಸುವಂತಾಗಬೇಕು. ಅಂತಹ ವ್ಯವಸ್ಥೆಗಾಗಿ ಸರಕಾರದಿಂದ ಹಣಕಾಸಿನ ನೆರವನ್ನು ಕೋರಲಾಗಿದ್ದು, ನೀಡುವ ಆಶ್ವಾಸನೆ ಇದೆ ಎಂದರು.
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸೂಕ್ತ ಪರಿಹಾರ
ಬೆಳ್ತಂಗಡಿಯಲ್ಲಿ ಅಡುಗೆ ಮನೆ ಪ್ರವೇಶಕ್ಕೆ ಅವಕಾಶ ಇಲ್ಲದ (ಋತುಮಾಸ) ಹಿನ್ನೆಲೆಯಲ್ಲಿ ಪತಿಯಲ್ಲಿ ಊಟ ಕೇಳಿ ದಾಗ ಕುಡಿತದ ಅಮಲಿನಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಆ್ಯಸಿಡ್ ದಾಳಿಯಿಂದ ಸಂತ್ರಸ್ತೆಯ ಕೆನ್ನೆ, ಎದೆಭಾಗ, ಕೈ ಭಾಗ ಸುಟ್ಟು ಹೋಗಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಳಗ್ಗೆ ಸಂತ್ರಸ್ತೆಯನ್ನು ಭೇಟಿ ಮಾಡಿದ್ದೇನೆ. ಅವರಿಗೆ ಸೂಕ್ತ ಪರಿಹಾರ, ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಒದಗಿಸಬೇಕಾ ಗಿದೆ. ಜಿಲ್ಲೆಯಲ್ಲಿ ಈ ಹಿಂದಿನ ಮೂರು ಆ್ಯಸಿಡ್ ದಾಳಿ ಪ್ರಕರಣಗಳಲ್ಲಿಯೂ ಪರಿಹಾರಕ್ಕೆ ಸೂಚಿಸಲಾಗಿದೆ. ಒಬ್ಬ ಸಂತ್ರಸ್ತೆಗೆ ನಾಲ್ಕು ಬಾರಿಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದ್ದು, ಐದನೇ ಸರ್ಜರಿಗೆ ಸೂಚಿಸಲಾ ಗಿದೆ. ಆಕೆ ಒಡವೆ ಅಡವಿಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿರುವುದಾಗಿ ತಿಳಿಸಿದ್ದು, ಈ ಶಸ್ತ್ರ ಚಿಕಿತ್ಸೆಯನ್ನೂ ಸರಕಾರದಿಂದ ಉಚಿತವಾಗಿ ಮಾಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.