ಸ್ವಚ್ಛತಾ ಹಿ ಸೇವಾ-2025' ಪ್ರಯುಕ್ತ ಉಚ್ಚಿಲ ಪೆರಿಬೈಲ್ ಬಳಿ ಬೀಚ್ ಸ್ವಚ್ಛತೆ ಕಾರ್ಯ
ಉಳ್ಳಾಲ: ಭಾರತ್ ಪೆಟ್ರೋಲಿಯಂ ನೇತೃತ್ವದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ, ಸೋಮೇಶ್ವರ ಪುರಸಭೆ, ಉಚ್ಚಿಲಗುಡ್ಡೆ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ 'ಸ್ವಚ್ಛತಾ ಹಿ ಸೇವಾ-2025' ಪ್ರಯುಕ್ತ ಉಚ್ಚಿಲ ಪೆರಿಬೈಲ್ ಬಳಿ ಬೀಚ್ ಸ್ವಚ್ಛತೆ ಕಾರ್ಯ ಗುರುವಾರ ನಡೆಯಿತು.
ಈ ವೇಳೆ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಕಸ ಹಾಕಲು ಅಳವಡಿಸಿದ್ದ ಕಸದ ತೊಟ್ಟಿಯನ್ನು ಕಳ್ಳರು ಎಗರಿಸಿದ್ದಾರೆ. ಇದಕ್ಕಾಗಿ ಐದು ಕಸದ ತೊಟ್ಟಿಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಭಾರತ್ ಪೆಟ್ರೋಲಿಯಂ ಮಂಗಳೂರು ಮಾರಾಟ ವಿಭಾಗದ ಅಧಿಕಾರಿ ಭರತ್ ಮಾತನಾಡಿ, ಬೀಚ್ ಸ್ವಚ್ಛತೆ ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಸ್ಥೆ ಪುರಸಭೆ ಮತ್ತು ಶಾಲಾ ಮಕ್ಕಳ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಮಾತನಾಡಿದರು.
ಸೋಮೇಶ್ವರ ಪುರಸಭೆಯ ಅಧ್ಯಕ್ಷೆ ಕಮಲ, ಭಾರತ್ ಪೆಟ್ರೋಲಿಯಂ ಮಂಗಳೂರು ಮಾರಾಟ ಪ್ರತಿನಿಧಿ ಮಂಜುನಾಥ್, ಫಳ್ನೀರ್ ವಿಭಾಗ ವ್ಯವಸ್ಥಾಪಕ ಜಯದೇವ್, ಸೋಮೇಶ್ವರ ವಿಭಾಗ ನಿರ್ವಾಹಕ ರಾಜೇಶ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕ ರವೀಂದ್ರ ಶೆಟ್ಟಿ, ಪುರಸಭಾ ಸದಸ್ಯ ಅಬ್ದುಲ್ ಸಲಾಂ, ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರು ಭಾಗವಹಿಸಿದ್ದರು.
ಪೌರ ಕಾರ್ಮಿಕೆ ಸಪ್ನಾ ವಂದಿಸಿದರು.