×
Ad

ಭಯದ ರಾಜಕೀಯಕ್ಕೆ ಪ್ರತಿರೋಧವಾಗಿ 10 ವರ್ಷಗಳು: ವಿಮೆನ್ ಇಂಡಿಯಾ ಮೂವ್ಮೆಂಟ್

Update: 2026-01-10 09:20 IST

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹಾಗೂ ನಿಷ್ಠಾವಂತ ಹೋರಾಟ ನಡೆಸಿ ಒಂದು ದಶಕವನ್ನು ಪೂರ್ಣಗೊಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ, ತುಳಿತಕ್ಕೊಳಗಾದ ಮಹಿಳೆಯರ ಧ್ವನಿಯನ್ನು ಬಲಪಡಿಸುವುದು, ಪ್ರಗತಿಪರ ನೀತಿ ಸುಧಾರಣೆಗಳಿಗೆ ಆಗ್ರಹಿಸುವುದು, ಲಿಂಗ ನ್ಯಾಯವನ್ನು ಉತ್ತೇಜಿಸುವುದು, ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರಿಗೆ ಯೋಗ್ಯ ಪ್ರತಿನಿಧಿತ್ವವನ್ನು ಖಚಿತಪಡಿಸುವುದು ಹಾಗೂ ಭಯ ಮತ್ತು ಬಹಿಷ್ಕಾರಾಧಾರಿತ ರಾಜಕೀಯಕ್ಕೆ ವಿರೋಧಿಸುವುದರಲ್ಲಿ ಈ ಚಳವಳಿ ನಿರಂತರವಾಗಿ ಕಾರ್ಯನಿರ್ವಹಿಸಿದೆ.

ತಳ ಮಟ್ಟದ ಸಂಘಟನೆ, ಸಮಾಜ ಸಂಪರ್ಕ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಸಂವಹನದ ಮೂಲಕ, ವಿಮೆನ್ ಇಂಡಿಯಾ ಮೂವ್ಮೆಂಟ್ ಹೊಸ ತಲೆಮಾರಿನ ಮಹಿಳೆಯರನ್ನು ನಾಯಕತ್ವದತ್ತ ಪ್ರೇರೇಪಿಸಿ, ಬದಲಾವಣೆಯ ಶಕ್ತಿಯಾಗಿ ರೂಪುಗೊಂಡಿದೆ. ಈ ಚಳವಳಿಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸದಾ ಕಾಪಾಡುತ್ತಾ, ನ್ಯಾಯಯುತ, ಸರ್ವರನ್ನೊಳಗೊಂಡ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ಸಂಕಲ್ಪಕ್ಕೆ ಬದ್ಧವಾಗಿಯೇ ಮುಂದುವರಿದಿದೆ.

ವಿಮೆನ್ ಇಂಡಿಯಾ ಮೂಮೆಂಟ್ ನ ಅಧ್ಯಕ್ಷರಾದ ಯಾಸ್ಮಿನ್ ಇಸ್ಲಾಂ ಅವರು ಮಾತನಾಡಿ, "ಕಳೆದ ಒಂದು ದಶಕದಲ್ಲಿ ಮಹತ್ವದ ಸಾಧನೆಗಳು ನಡೆದಿದ್ದರೂ ಇನ್ನೂ ಸಾಗಬೇಕಾದ ದಾರಿ ದೀರ್ಘವಾಗಿದೆ. ಇದುವರೆಗೆ ನಡೆದ ಪ್ರಯಾಣದ ಬಗ್ಗೆ ಚಳವಳಿಗೆ ಹೆಮ್ಮೆಯಿದ್ದು, ಮಹಿಳೆಯರ ಹಕ್ಕುಗಳು, ಸಬಲೀಕರಣ ಹಾಗೂ ನೀತಿನಿರೂಪಣಾ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆಗೆ ಸಂಬಂಧಿಸಿದ ಹೋರಾಟವನ್ನು ಮುಂದುವರಿಸುವಲ್ಲಿ ಚಳವಳಿ ದೃಢ ಸಂಕಲ್ಪ ಹೊಂದಿದೆ" ಎಂದು ತಿಳಿಸಿದರು.

ತನ್ನ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ, ವಿಮೆನ್ ಇಂಡಿಯಾ ಮೂವ್ಮೆಂಟ್ ದೇಶದಾದ್ಯಂತ ಧ್ವಜಾರೋಹಣ ಕಾರ್ಯಕ್ರಮಗಳು, ವೈದ್ಯಕೀಯ ಶಿಬಿರಗಳು, ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಈ ಕಾರ್ಯಕ್ರಮಗಳು ಸಾರ್ವಜನಿಕ ಸೇವೆ- ಏಕತೆ ಬೆಂಬಲಿಸುವ ಮತ್ತು ಭಯದ ರಾಜಕೀಯಕ್ಕೆ ವಿರೋಧಿಸುವ ಚಳವಳಿಯ ಶಾಶ್ವತ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಮಹಿಳೆಯರ ಗೌರವ, ನ್ಯಾಯ ಮತ್ತು ಸಮಾನತೆಗಾಗಿ ನಡೆದಿರುವ ಸಿದ್ಧಾಂತಬದ್ಧ ಪ್ರತಿರೋಧ ಮತ್ತು ಸಾಮೂಹಿಕ ಕಾರ್ಯ ಚಟುವಟಿಕೆಗಳು ಹತ್ತು ವರ್ಷಗಳನ್ನು ಸ್ಮರಿಸುವಲ್ಲಿ ದೇಶದಾದ್ಯಂತ ಜನರು ಭಾಗವಹಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರೆ ನೀಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News