×
Ad

ಮಾರ್ಚ್ 27,28 ರಂದು ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2026-01-11 13:00 IST

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಬಂಟ್ವಾಳ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮಾರ್ಚ್ 27 ಮತ್ತು 28ರಂದು ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಘೋಷಿಸಿದ್ದಾರೆ.

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮಿತಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಮೆರವಣಿಗೆ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು ನಡೆಯಲಿದ್ದು, ಸ್ಥಳೀಯ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ಸಾಹಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಸಮ್ಮೇಳನದ ಸಂದರ್ಭದಲ್ಲೇ ಪುಸ್ತಕ ಬಿಡುಗಡೆಗೆ ಸಹ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿಶೇಷವಾಗಿ ಗಡಿನಾಡ ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಹಾಗೂ ಎಲ್ಲ ವರ್ಗದ ಜನರಿಗೂ ಆಸಕ್ತಿ ಮೂಡಿಸುವಂತಹ ಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಆಶಯ ವ್ಯಕ್ತವಾಯಿತು.

ಸಭೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿಗಳಾದ ವಿ.ಸು. ಭಟ್ ಹಾಗೂ ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಅಬ್ದುಲ್ ರಹಮಾನ್ ಡಿ.ಬಿ., ಜಿಲ್ಲಾ ಕಸಾಪ ಸದಸ್ಯರಾದ ಪೂವಪ್ಪ ನೇರಳಕಟ್ಟೆ ಹಾಗೂ ಸುಭಾಶ್ಚಂದ್ರ ಜೈನ್, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರಮುಖರಾದ ಕೈಯೂರು ನಾರಾಯಣ ಭಟ್, ದೇವಪ್ಪ ಕುಲಾಲ್ ಪಂಜಿಕಲ್ಲು, ಎಚ್.ಕೆ. ನಯನಾಡು, ಸಂಕಪ್ಪ ಶೆಟ್ಟಿ, ಜಯಾನಂದ ಪೆರಾಜೆ, ಪ್ರೊ. ಎಂ.ಡಿ. ಮಂಚಿ, ಜಯರಾಮ ಪಡ್ರೆ, ಸೋನಿತಾ ಕೆ. ನೇರಳಕಟ್ಟೆ, ಉಮ್ಮರ್ ಮಂಚಿ, ಸಾಯಿರಾಮ ನಾಯಕ್, ಗೀತಾ ಕೋಂಕೋಡಿ, ಸನ್ಮತಿ ಜಯಕೀರ್ತಿ, ದಾಮೋದರ ಏರ್ಯ, ಶ್ರೀಕಲಾ ಕಾರಂತ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ್ದು, ಅಬೂಬಕ್ಕರ್ ಅಮ್ಮಂಜೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News