ಅಸೈಗೋಳಿ: ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಆರೋಪ; ಸ್ಥಳೀಯರಿಂದ ಪಂಚಾಯತ್ ಗೆ ಮನವಿ
ಕೊಣಾಜೆ: ಅಸೈಗೋಳಿಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆಯ ಮೂಲ ನಕ್ಷೆಯಲ್ಲಿ ಪರಿವರ್ತನೆ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪದೊಂದಿಗೆ, ರಸ್ತೆ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಸ್ಥಳೀಯರು ಶುಕ್ರವಾರ ಕೊಣಾಜೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರು.
ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಅಗತ್ಯ ಭೂಮಿ ಒದಗಿಸುವ ಉದ್ದೇಶದಿಂದ ರಸ್ತೆಗೆ ತಾಗಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂಗಡಿ ಉಳಿಸಲು ಲಾಬಿ ಆರೋಪ
ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಅರುಣ್ ಡಿಸೋಜ ಅವರು, ರಸ್ತೆ ನಿರ್ಮಾಣ ಕಾಮಗಾರಿಯ ವೇಳೆ ನೀರು ಹಾಗೂ ವಿದ್ಯುತ್ ಪೈಪ್‌ಗಳು ಇನ್ನೂ ಮೇಲ್ಭಾಗದಲ್ಲಿರುವುದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್ 31ರೊಳಗೆ ತೆರವು ನೋಟಿಸ್ ಪಕ್ಕದಲ್ಲಿರುವ ಅಂಗಡಿಗಳನ್ನು ಖಾಲಿ ಮಾಡುವಂತೆ ಗ್ರಾಮ ಪಂಚಾಯತ್ ನೋಟಿಸ್ ನೀಡಿದ್ದರೂ, ಕೆಲವರು ಅಂಗಡಿ ಉಳಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹಳೇ ಕಟ್ಟಡ ಉಳಿಸುವ ನೆಪದಲ್ಲಿ ಕೆಲ ವ್ಯಕ್ತಿಗಳು ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಮಾಡಲು ಯತ್ನಿಸುತ್ತಿದ್ದು, ಇದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಅವರು ದೂರಿದರು.
ಚತುಷ್ಪಥ ರಸ್ತೆಗೆ 18 ಮೀಟರ್ ಅಗಲದ ಭೂವಿಸ್ತೀರ್ಣಕ್ಕೆ ಈಗಾಗಲೇ ಗುರುತು ಹಾಕಲಾಗಿದ್ದು, ಹಳೇ ಕಟ್ಟಡ ತೆರವು ಹಾಗೂ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ. ಆದರೆ, ತೆರೆಮರೆಯಲ್ಲಿ ಕೆಲವರು ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ಹೊಸ ಅಂಗಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಚರಂಡಿ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ, ಸುಸಜ್ಜಿತ ಬಸ್ ಹಾಗೂ ಆಟೋ ನಿಲ್ದಾಣ ನಿರ್ಮಾಣಕ್ಕೂ ಯೋಜನೆ ರೂಪಿಸುವಂತೆ ಅವರು ಆಗ್ರಹಿಸಿದರು.
ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ
ಮೂಲ ಯೋಜನಾ ನಕ್ಷೆಯನ್ನು ಯಾವುದೇ ರೀತಿಯ ತಿದ್ದುಪಡಿ ಇಲ್ಲದೆ ಕಾಪಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸಬೇಕು. ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ರಸ್ತೆಯ ಒಂದು ಬದಿಯ ಕಟ್ಟಡ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿರುವ ಬಗ್ಗೆ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಂಜೆಯೊಳಗೆ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿರುವುದಾಗಿ ಸ್ಥಳೀಯರಾದ ರೊನಾಲ್ಡ್ ಡಿಸೋಜ ತಿಳಿಸಿದರು. “ಸುಂದರ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣವೇ ನಮ್ಮ ಬೇಡಿಕೆ” ಎಂದು ಹೇಳಿದರು.
ಮನವಿ ಸ್ವೀಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ರಜನಿ ಅವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ್ ಬಿ. ಅಸೈಗೋಳಿ, ರೋಯ್‌ದಾಸನ್, ರಾಜೇಶ್ ಗಾಣಿಗ, ಸ್ಟೀವನ್ ರೇಗೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.