×
Ad

ಸೆ.7-9ರ ವರೆಗೆ ಡಿವೈಎಫ್ಐನಿಂದ ಜಿಲ್ಲಾದ್ಯಂತ ಯುವಜನ ಜಾಥಾ: ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರೊ.ನರೇಂದ್ರ ನಾಯಕ್ ಆಯ್ಕೆ

Update: 2025-08-08 11:36 IST

ಮಂಗಳೂರು: 'ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್' ಎಂಬ ಘೋಷಣೆಯಡಿ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು ಹಾಗೂ ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಆಗ್ರಹಿಸಿ ಸೆಪ್ಟಂಬರ್ 7, 8, 9 ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಯುವಜನರ ಜಾಥಾ ಸಂಘಟಿಸಲು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ನಿರ್ಧರಿಸಿದೆ. ಈ ಜಾಥಾದ ಯಶಸ್ವಿಗಾಗಿ ಆ.7ರಂದು ನಗರದ ವಿಕಾಸ ಕಚೇರಿಯಲ್ಲಿ ಸ್ವಾಗತ ಸಮಿತಿ ರಚನಾ ಸಭೆ ನಡೆಯಿತು.

 ಸಭೆಯನ್ನುದ್ದೇಶಿಸಿ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತಾಶ ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಪ್ರತೀ ವರ್ಷ ಸುಮಾರು ಒಂದು ಲಕ್ಷದಷ್ಪು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿ ಸರ್ಟಿಫಿಕೆಟ್ ಪಡೆದು ಹೊರಬರುತ್ತಿದ್ದರೂ ಅವರ ಶಿಕ್ಷಣಕ್ಕೆ ಪೂರಕವಾದ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರಕಾರಗಳು ವಿಫಲವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದರೂ ಅವುಗಳು ಉದ್ಯೋಗ ಸೃಷ್ಟಿಸುವಲ್ಲಿ ಹಿಂದೆ ಬಿದ್ದಿವೆ. ಅಲ್ಲದೆ ಸ್ಥಳೀಯ ಯುವಜನರಿಗೆ ಆದ್ಯತೆ ನೀಡದೆ ಹೊರಗಿಡಲಾಗುತ್ತಿದೆ. ಇನ್ನು ರೈಲ್ವೆ, ಬ್ಯಾಂಕ್, ಎಂ.ಆರ್.ಪಿ.ಎಲ್.ನಂತಹ ಕ್ಷೇತ್ರಗಳಲ್ಲಿ ಇರುವ ಚಿನ್ನದಂತಹ ಖಾಯಂ ಉದ್ಯೋಗಗಳು ಹೊರ ರಾಜ್ಯದವರಿಗಷ್ಟೇ ಮೀಸಲಾಗಿದೆ. ಈ ಹಿಂದೆ ಕೇಂದ್ರ ಸರಕಾರ ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈವರೆಗೂ ಈಡೇರಿಲ್ಲ ಬದಲಾಗಿ ಇಂಟರ್ ಶಿಪ್ ಅನ್ನೂ ಉದ್ಯೋಗ ಎಂದು ಬಿಂಬಿಸಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿ ಕೊಡಲಾಗುತ್ತಿದೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.70 ಲಕ್ಷ ಸರಕಾರಿ ಹುದ್ದೆ ಖಾಲಿ ಬಿದ್ದಿದ್ದರೂ ಈವರೆಗೂ ಭರ್ತಿಗೊಳಿಸುವ ನಿರ್ಧಾರಕ್ಕೆ ಬಂದಿಲ್ಲ. ಇತ್ತಿಚೇಗೆ ಖಾಸಗೀ ರಂಗದ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸುವ 'ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024'ಯನ್ನು ಜಾರಿಮಾಡಲು ಹೊರಟ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿ ಧಣಿಗಳ ವಿರೋಧಕ್ಕೆ ಮಣಿದು ಈ ಯೋಜನೆಯನ್ನೇ ಕೈಬಿಟ್ಟಿರುವ ನಡೆಯಿಂದ ಸರಕಾರಕ್ಕೆ ರಾಜ್ಯದ ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಎಷ್ಟು ಆಸಕ್ತಿಯನ್ನು ಹೊಂದಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಈ ಹಿನ್ನೆಲೆಯಲ್ಲಿ ಡಿವೈಎಫ್ಐ ಉದ್ಯೋಗ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಬೇಕು ಎಂಬ ಆಶಯದಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಸ್ಥಳೀಯ ಯುವಜನರಿಗೆ ಉದ್ಯೋಗದಲ್ಲಿ ದೊಡ್ಡ ಪಾಲು ಸಿಗಬೇಕು ಎಂಬ ಪ್ರಧಾನ ಬೇಡಿಕೆಯನ್ನು ಮುಂದಿಟ್ಟು ಯುವಜನರ ಬೃಹತ್ ಆಂದೋಲನಕ್ಕೆ ಮುಂದಾಗಿದೆ ಎಂದರು.

ಸಭೆಯಲ್ಲಿ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ.ದೇವದಾಸ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ತಯ್ಯೂಬ್ ಬೆಂಗರೆ, ನವೀನ್ ಕೊಂಚಾಡಿ ಉಪಸ್ಥಿತರಿದ್ದರು.

ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಸ್ವಾಗತ ಸಮಿತಿ ರಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಪ್ರೊ.ನರೇಂದ್ರ ನಾಯಕ್, ಕಾರ್ಯಾಧ್ಯಕ್ಷರಾಗಿ ಮಂಜುಳಾ ನಾಯಕ್, ಅಧ್ಯಕ್ಷರಾಗಿ ಬಿ.ಕೆ.ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಜಾಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ವಾಮಂಜೂರು, ಕೋಶಾಧಿಕಾರಿಯಾಗಿ ರಿಝ್ವಾನ್ ಹರೇಕಳರನ್ನು ಆಯ್ಕೆ ಮಾಡಲಾಯಿತು. 150ಕ್ಕೂ ಅಧಿಕ ಸದಸ್ಯರ ಸಮಿತಿ ರಚಿಸಲಾಯಿತು.

ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಸದಾಶಿವ ದಾಸ್, ಯೋಗೀಶ್ ಜಪ್ಪಿನಮೊಗರು, ವಾಸುದೇವ ಉಚ್ಚಿಲ, ಡಾ ಕೃಷ್ಣಪ್ಪ ಕೊಂಚಾಡಿ, ಡಾ.ಜೀವನ್ ರಾಜ್, ಆದಿವಾಸಿ ಸಂಘಟನೆಯ ಕರಿಯ ಕೆ., ಲಕ್ಷ್ಮಣ್ ವಾಮಂಜೂರು, ಶ್ಯಾಮ್ ಸುಂದರ್, ಮೈಕೆಲ್ ಡಿಸೋಜ, ಮದರ್ ತೆರೆಸಾ ವಿಚಾರ ವೇದಿಕೆಯ ಡೋಲ್ಫಿ ಡಿಸೋಜ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಪ್ರಮೀಳಾ ದೇವಾಡಿಗ, ಪ್ರಮೋದಿನಿ, ಯೋಗಿತಾ, ಸುನಂದಾ ಕೊಂಚಾಡಿ, ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್, ವಿದ್ಯಾರ್ಥಿ ಸಂಘಟನೆಯ ವಿನುಷಾ ರಮಣ, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ, ಬಿ.ಎನ್.ದೇವಾಡಿಗ, ನಾಗೇಶ್, ಡಿವೈಎಫ್ಐನ ರಝಾಕ್ ಮುಡಿಪು, ಅಶ್ರಫ್ ಹರೇಕಳ, ಮಾಧುರಿ ಬೋಳಾರ, ಸನಿಲ್ ತೇವುಲ, ಜಗದೀಶ್ ಬಜಾಲ್, ಚರಣ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News