×
Ad

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾ ಸಮ್ಮೇಳನ

Update: 2025-07-27 17:33 IST

ಮಂಗಳೂರು: ಧರ್ಮಸ್ಥಳದಲ್ಲಿ ಕೊಲೆಗೀಡಾದ ಪದ್ಮಲತಾ, ವೇದವಲ್ಲಿ, ಸೌಜನ್ಯ, ಯಮುನಾ ಸಹಿತ ಎಲ್ಲಾ ಹೆಣ್ಣುಮಕ್ಕಳ ಪ್ರಕರಣಗಳು ಮರು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ರವಿವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾ ಸಮ್ಮೇಳನ ನಿರ್ಣಯ ಕೈಗೊಂಡಿದೆ.

ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣ (ನಾಡೋಜ ಸಾರಾ ಅಬೂಬಕ್ಕರ್ ವೇದಿಕೆ)ದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷೆ ಫ್ಲೇವಿ ಕ್ರಾಸ್ತಾ ಅಧ್ಯಕ್ಷತೆೆಯಲ್ಲಿ ನಡೆದ ಸಮ್ಮೇಳನದಲ್ಲಿ ಧರ್ಮಸ್ಥಳ ಅಸಹಜ ಸಾವುಗಳು, ಅಕ್ರಮವಾಗಿ ಹೆಣ ಹೂತು ಹಾಕಿದ ಆರೋಪ ಪ್ರಕರಣದ ನ್ಯಾಯಯುತ ತನಿಖೆ ನಡೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ನಡೆಸಿ ಕೊಲೆಗೈಯ್ಯಲ್ಪಟ್ಟ ಹತ್ತಾರು ಅಪರಿಚಿತ ಹೆಣ್ಣು ಮಕ್ಕಳ ಜರ್ಜರಿತ ಮೃತ ದೇಹಗಳನ್ನು ತನ್ನಿಂದ ಬಲವಂತವಾಗಿ ಮಣ್ಣು ಮಾಡಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿದ್ದೆ ಎಂದು ಹೇಳಿಕೊಂಡಿರುವ ಗುರುತು ಮರೆಮಾಚಲ್ಪಟ್ಟ ವ್ಯಕ್ತಿಯೊಬ್ಬ ದೂರು ದಾಖಲಿಸಲ್ಪಟ್ಟ ಬಳಿಕ ಧರ್ಮಸ್ಥಳದಲ್ಲಿ ಮಹಿಳೆಯರ ಅಸಹಜ ಸಾವು, ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣಗಳು ಮತ್ತೊಮ್ಮೆ ದೊಡ್ಡ ರೀತಿಯ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸಾಕ್ಷಿ ದೂರುದಾರನಾಗಿ ಮಾರ್ಪಟ್ಟಿರುವ ಗುರುತು ಮರೆಮಾಚಲ್ಪಟ್ಟ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಸಮ್ಮುಖ ಹೇಳಿಕೆ ದಾಖಲಿಸಿದ ತರುವಾಯ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆತಂಕ, ಆಕ್ರೋಶದ ಹೊಸ ಅಲೆಗೆ ಕಾರಣವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಬಲವಾದ ಸಾರ್ವಜನಿಕ ಒತ್ತಡದ ತರುವಾಯ ರಾಜ್ಯ ಸರಕಾರ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ ) ರಚಿಸಿದೆ. ವೃತ್ತಿಪರರು, ದಕ್ಷರು ಎಂದು ಹೆಸರಿರುವ ಅಧಿಕಾರಿಗಳನ್ನು ಈ ತಂಡಕ್ಕೆ ನಿಯೋಜಿಸಿದೆ. ಇದು ಜನತೆಯಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದರೂ, ರಾಜ್ಯದ ಪ್ರಬಲ ರಾಜಕೀಯ ಪಕ್ಷಗಳು ಪ್ರಕರಣದ ಕುರಿತು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿರುವ ನಿಲುವುಗಳನ್ನು ಕಾಣುವಾಗ ಜನಸಾಮಾನ್ಯರಲ್ಲಿ ಧರ್ಮಸ್ಥಳದ ಸರಣಿ ಅಸಹಜ ಸಾವು, ಅತ್ಯಾಚಾರ, ಕೊಲೆ ಪ್ರಕರಣಗಳು, ಸಾಕ್ಷಿ ದೂರುದಾರನ ಹೆಣಗಳನ್ನು ಹೂತು ಹಾಕಿದ ಆರೋಪಗಳಲ್ಲಿ ರಾಜಕಾರಣದ ಹಸ್ತಕ್ಷೇಪಗಳು ಇಲ್ಲದೆ ನಿಷ್ಪಕ್ಷವಾದ ತನಿಖೆ ನಡೆಯುವ, ನಿಗೂಢತೆಗಳು ಬಯಲಿಗೆ ಬರುವ ಕುರಿತು ಸಹಜವಾದ ಆತಂಕಗಳು ಎದ್ದು ಕಾಣುತ್ತಿವೆ. ರಾಜ್ಯ ಸರಕಾರ ಇಂತಹ ಆತಂಕಗಳನ್ನು ಗಮನಿಸಬೇಕು, ವಿಶೇಷ ತನಿಖಾ ತಂಡಕ್ಕೆ ಮುಕ್ತ ಅವಾಕಾಶ ನೀಡಬೇಕು, ನ್ಯಾಯಯುತ ತನಿಖೆಯನ್ನು ಖಾತರಿ ಪಡಿಸಬೇಕು. ಸಾಕ್ಷಿ ದೂರದಾರ ಹಾಗು ಆತನ ಪರವಾದ ನ್ಯಾಯವಾದಿಗಳಿಗೆ ಗರಿಷ್ಠ ಭದ್ರತೆ ಒದಗಿಸಬೇಕು. ಸಾಕ್ಷಿ ದೂರುದಾರನ ಹೆಣಗಳನ್ನು ಹೂತು ಹಾಕಿದ ಆರೋಪಗಳನ್ನು ತನಿಖೆ ಒಳಪಡಿಸುವುದಕ್ಕೆ ತನಿಖೆಯನ್ನು ಸೀಮಿತಗೊಳಿಸದೆ, 80ರ ದಶಕದಲ್ಲಿ ಅಪಹರಣಕ್ಕೆ ಒಳಪಟ್ಟು ಕೊಲೆಗೀಡಾದ, ಪತ್ತೆ ಹಚ್ಚಲಾಗದ ಪ್ರಕರಣ ಎಂದು ಷರಾ ಬರೆದಿರುವ ವಿದ್ಯಾರ್ಥಿನಿ ಪದ್ಮಲತಾ ಪ್ರಕರಣ, ಸೌಜನ್ಯ ಪ್ರಕರಣ, ಪತ್ತೆ ಹಚ್ಚಲಾಗದ ಪ್ರಕರಣ ಎಂದು ಷರಾ ಬರೆಯಲಾಗಿರುವ ಮತ್ತೊಂದು ಪ್ರಕರಣವಾದ ಕೊಲೆಯಾದ ಆನೆ ಮಾವುತ ನಾರಾಯಣ, ಆತನ ಸೋದರಿ ಯುಮುನಾ ಕೊಲೆ ಪ್ರಕರಣಗಳನ್ನೂ ಈಗ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಒಳಪಡಿಸಬೇಕು ಅಥವಾ ಪ್ರತ್ಯೇಕ ತನಿಖಾ ತಂಡ ರಚಿಸಿ ಮರು ತನಿಖೆ ನಡೆಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನವು ಆಗ್ರಹಿಸಿದೆ.

ಜಿಲ್ಲಾ ಸಮಿತಿಯ ಈಶ್ವರಿ ನಿರ್ಣಯ ಮಂಡಿಸಿದರು.

ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಅವರು ಅನುಮೋದನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News