Mangaluru | ಪ್ರಧಾನಿ ಮೋದಿ ಭೇಟಿಗಾಗಿ ಎಂಎಲ್ಸಿ ಪತ್ನಿಗೆ ಬಿಜೆಪಿಯಲ್ಲಿ ನಕಲಿ ಹುದ್ದೆ ಸೃಷ್ಟಿ : ಅರುಣ್ ಕುಮಾರ್ ಪುತ್ತಿಲ ಪರಿವಾರ ಆರೋಪ
ಮಂಗಳೂರು,ಡಿ.6: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉಡುಪಿಗೆ ಆಗಮಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಅವರನ್ನು ಸ್ವಾಗತಿಸುವ ಪ್ರಮುಖರ ಪಟ್ಟಿಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಅವರ ಪತ್ನಿಗೆ ಪಕ್ಷದ ನಕಲಿ ಹುದ್ದೆ ಸೃಷ್ಟಿಸಿ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬಿಜೆಪಿಯಿಂದ ಬಂಡಾಯ ಎದ್ದಿರುವ ಅರುಣ್ ಕುಮಾರ್ ಪುತ್ತಿಲ ಮತ್ತವರ ಪರಿವಾರವು ಸಾಮಾಜಿಕ ಜಾಲತಾಣಗಳ ತನ್ನ ಖಾತೆಯಲ್ಲಿ ಕಿಶೋರ್ ಕುಮಾರ್ ತನ್ನ ಪತ್ನಿಯನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿಸುವುದಕ್ಕಾಗಿ ಪಕ್ಷದ ಮಹಿಳಾ ಮೋರ್ಚಾದ ದ.ಕ.ಜಿಲ್ಲಾ ಉಪಾಧ್ಯಕ್ಷೆ ಎಂದು ಬಿಂಬಿಸಿದ್ದಾರೆ. ಆಕೆ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯೇ ಅಲ್ಲ. ಜನಪ್ರತಿನಿಧಿಗಳು ತಮ್ಮ ಸಿಕ್ಕ ಅವಕಾಶವನ್ನು ಕಾರ್ಯಕರ್ತರಿಗೆ ಕೊಡಬೇಕೇ ವಿನಃ ಹೆಂಡತಿಯರಿಗೆ ಅಲ್ಲ ಎಂದು ವ್ಯಂಗ್ಯವಾಡಿದೆ.
ಈಗಾಗಲೇ ಪ್ರಧಾನಿಯನ್ನು ಭೇಟಿ ಮಾಡಿದ ಎಂಎಲ್ಸಿ ಕಿಶೋರ್ ಕುಮಾರ್ ಅವರ ಪತ್ನಿಯ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಪ್ರತಿಯಾಗಿ ಪುತ್ತಿಲ ಪರಿವಾರವು ಎಂಎಲ್ಸಿ ಕಿಶೋರ್ ಕುಮಾರ್ ಮತ್ತು ಬಿಜೆಪಿ ಮುಖಂಡರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿಯು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪ್ರಮುಖ ಜವಾಬ್ದಾರಿ ನೀಡುತ್ತಾ ಬಂದಿದೆ. ಒಬ್ಬ ಕಾರ್ಯಕರ್ತನಾಗಿದ್ದ ತಾನೂ ಕೂಡ ಇದೀಗ ಜಿಲ್ಲೆಯ ಪ್ರಮುಖನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿಯ ಭೇಟಿಗಾಗಿಯೇ ಎಂಎಲ್ಸಿ ಕಿಶೋರ್ ಕುಮಾರ್ ಅವರ ಪತ್ನಿಗೆ ಬಿಜೆಪಿಯಲ್ಲಿ ನಕಲಿ ಹುದ್ದೆ ಸೃಷ್ಟಿಸಲಾಗಿದೆ ಎಂಬ ಪುತ್ತಿಲ ಪರಿವಾರದ ಆರೋಪಕ್ಕೆ ಜಿಲ್ಲೆಯ ಕೆಲವು ಬಿಜೆಪಿ ಪ್ರಮುಖರು ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ. ರಾಜಕೀಯದಲ್ಲಿ ಅಂತಹ ಆರೋಪಗಳು ಸಹಜ. ಅದೆಲ್ಲಾ ದೊಡ್ಡ ವಿಷಯವೇ ಅಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರು-ಉಡುಪಿಗೆ ಭೇಟಿ 8-9 ದಿನಗಳು ಕಳೆದರೂ ಬಿಜೆಪಿ-ಪುತ್ತಿಲ ಪರಿವಾರದ ಮಧ್ಯೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.