×
Ad

ಮಂಗಳೂರು | ವಾಯುಪಡೆಯ ನಿವೃತ್ತ ಅಧಿಕಾರಿಗೆ ರೈಲ್ವೆ ಪೊಲೀಸರಿಂದ ಹಲ್ಲೆ ಆರೋಪ; ತಳ್ಳಿ ಹಾಕಿದ ಪಾಲಕ್ಕಾಡ್ ವಿಭಾಗ

Update: 2025-02-17 22:34 IST

ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬೆಂಚ್ ಮೇಲೆ ನಿಶಕ್ತಿಯಿಂದ ಮಲಗಿದ್ದ ತನ್ನ ಮೇಲೆ ರೈಲ್ವೆ ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ತನ್ನ ಕಾಲು ತುಂಡರಿಸುವಂತಾಗಿದೆ ಎಂದು ಕೇರಳ ಮೂಲದ ವಾಯುಪಡೆಯ ನಿವೃತ್ತ ಅಧಿಕಾರಿ ಪಿ.ವಿ. ಸುರೇಶನ್ ಎಂಬವರ ಆರೋಪವನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ತಳ್ಳಿಹಾಕಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಘಟನೆಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ದಾಖಲಾಗಿದೆ. ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಫೆ.1ರಂದು ದೂರುದಾರ ಸುರೇಶನ್‌ಗೆ ರೈಲು ನಿಲ್ದಾಣದ ಫುಡ್ ಪ್ಲಾಝಾ ರೆಸ್ಟೋರೆಂಟ್ ಬಳಿಯಿಂದ ಸಾಗುವಂತೆ ಸಲಹೆ ನೀಡಿದ್ದಾರೆ. ಯಾರ ಸಹಾಯವೂ ಇಲ್ಲದೆ ಅವರು ನಡೆದುಕೊಂಡು ಹೋಗಿದ್ದಾರೆ. ಈ ದೃಶ್ಯಾವಳಿಯನ್ನು ಸರಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸುರೇಶನ್ ಕುಡಿದ ಅಮಲಿನಲ್ಲಿ ನಿಲ್ದಾಣದ ಬೆಂಚಿನಲ್ಲಿ ಮಲಗಿದ್ದರು. ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಲಾಗಿತ್ತು. ಅದರಂತೆ ಸುರೇಶನ್ ಅಲ್ಲಿಂದ ತೆರಳಿದ್ದಾರೆ. ರೈಲ್ವೆ ಪೊಲೀಸರು ಹಲ್ಲೆ ಮಾಡಿರುವ ಕುರಿತು ಪ್ರಯಾಣಿಕರು ಕೂಡ ಗಮನಸೆಳೆದಿಲ್ಲ. ಸುರೇಶನ್ ನಿಶಕ್ತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯಕೀಯ ದಾಖಲೆಗಳ ಪ್ರಕಾರ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಅವರು ಬಳಲುತ್ತಿದ್ದರು. ಆ ಕಾರಣಕ್ಕಾಗಿ ಅವರ ಕಾಲನ್ನು ಕತ್ತರಿಸಬೇಕಾದ ಅನಿವಾರ್ಯತೆ ಬಂದಿರಬಹುದು. ಅವರಿಗೆ ನಿಲ್ದಾಣದಲ್ಲಿ ಹೊಡೆದಿರುವ ಅಥವಾ ನಿಲ್ದಾಣವನ್ನು ಬಿಟ್ಟು ಹೋಗುವಂತೆ ಬಲ ಪ್ರಯೋಗ ಮಾಡಿರುವ ಯಾವುದೇ ಸಾಕ್ಷಿಗಳು ಇಲ್ಲ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News