ಅನಾಮಿಕ ದೂರುದಾರನಿಗೆ ಒತ್ತಡ ಹಾಕಿರುವ ಮೂವರು ಯಾರೆಂದು ತನಿಖೆಯಾಗಲಿ: ಸತೀಶ್ ಕುಂಪಲ
ಮಂಗಳೂರು, ಆ.19: ಧರ್ಮಸ್ಥಳದ ಗ್ರಾಮದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದ ದೂರುದಾರ ಅನಾಮಿಕ ವ್ಯಕ್ತಿಯ ಮೇಲೆ ಒತ್ತಡ ಹಾಕಿರುವ ಮೂರು ಮಂದಿ ಯಾರೆಂದು ತನಿಖೆಯಾಗಲಿ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಉಪಮುಖ್ಯ ಡಿಕೆಶಿ ಹೇಳಿದ್ದಾರೆ ಅದರ ಬಗ್ಗೆಯೂ ತನಿಖೆಯಾಗಲಿ. ಅನಾಮಿಕ ವ್ಯಕ್ತಿ ಹಾಗೂ ಯೂಟ್ಯೂಬರ್ ಸಮೀರ್‌ನನ್ನು ಸರಕಾರ ಬಂಧಿಸಿ ವಿಚಾರಣೆಗೊಳಪಡಿಸಲಿ ಎಂದು ಆಗ್ರಹಿಸಿದರು.
ಎಸ್‌ಟಿ ತನಿಖೆಯಾಗುವಾಗ ತನಿಖೆಗೆ ಅಡ್ಡಿ ಪಡಿಸುವುದು ಬೇಡ ಎಂಬ ಉದ್ದೇಶದಿಂದ ಬಿಜೆಪಿ ಇಷ್ಟರ ತನಕ ಸುಮ್ಮನಿತ್ತು. ಆದರೆ ಈಗ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ ಕಂಡು ಬಂದಿದೆ. ಧರ್ಮಸ್ಥಳ ಮಾತ್ರವಲ್ಲ ಯಾವುದೇ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆದರೂ ಬಿಜೆಪಿ ಅದರ ವಿರುದ್ಧ ಹೋರಾಟ ನಡೆಸಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಮಹೇಶ್ ತಿಮರೋಡಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದ್ದಾಗಿ ಮಾತನಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಂಪಲ ಅವರು ಕೌಟುಂಬಿಕ ಬದುಕನ್ನು ಬದಿಗಿಟ್ಟು ಆರ್‌ಎಸ್‌ಎಸ್, ಬಿಜೆಪಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ನಾಯಕರು ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಮಹೇಶ್ ತಿಮರೋಡಿ ಆಡಿರುವ ಮಾತಿನಿಂದ ನಮಗೆ ನೋವುಂಟು ಮಾಡಿದೆ . ಇದು ಕೋಟ್ಯಂತರ ಜನರಿಗೆ ಮಾಡಿದ ಅವಮಾನ ಎಂದರು.
ಸಂತೋಷ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮಕೊಳ್ಳಬೇಕಿತ್ತು. ಅದನ್ನು ಇನ್ನೂ ಮಾಡಿಲ್ಲ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.
ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಭರದಲ್ಲಿ ಪುತ್ತೂರಿನ ಕಾಂಗ್ರೆಸ್ ಧುರೀಣ ಎಚ್. ಮುಹಮ್ಮದಾಲಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಉಲ್ಲೇಖಿಸಿರು ವುದು ಖಂಡನೀಯ ಎಂದು ಹೇಳಿದ ಸತೀಶ್ ಕುಂಪಲ ಅವರು ಮುಹಮ್ಮದಾಲಿ ವಿರುದ್ಧ ಪೊಲೀಸರು ಸುಮೋಟೊ ಕೇಸು ದಾಖಲಿಸಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ಏನು ಕೇಸು ಇಲ್ಲದ ಪುತ್ತೂರಿನ ಆರ್‌ಎಸ್‌ಎಸ್‌ನ 84ರ ಹರೆಯದ ಪೂವಪ್ಪ ಅವರ ಮನೆಗೆ ರಾತ್ರಿ ಹೋಗಲು ಪೊಲೀಸರಿಗೆ ದಾರಿ ಗೊತ್ತಾಗಿದೆ. ಆದರೆ ಮುಹಮ್ಮದಾಲಿ ಮನೆಗೆ ದಾರಿ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
40 ಗುಂಡಿ ತೆಗೆಯಲಿ ನಮ್ಮ ದೇನು ಅಭ್ಯಂತರವಿಲ್ಲ: ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು.
ಅನಾಮಿಕನ ದೂರಿನಂತೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಸರಕಾರ ವಹಿಸಿಕೊಟ್ಟಂತೆ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ. ಅದರ ಬಗ್ಗೆ ನಮ್ಮದೇನು ತಕರಾರು ಇಲ್ಲ. ತನಿಖೆಗೆ ಇನ್ನೂ ಬೇಕಿದ್ದರೆ 40 ಗುಂಡಿ ತೆಗೆದು ನೋಡಲಿ. ಸತ್ಯಾಸತ್ಯತೆ ವಿಚಾರ ಹೊರಬರಲಿ. ಆದರೆ ಇದೇ ವೇಳೆ ಧಾರ್ಮಿಕ ಕೇಂದ್ರಕ್ಕೆ ಧಕ್ಕೆಯನ್ನುಂಟು ಮಾಡುವುದು ಸರಿಯಲ್ಲ ಎಂದು ಸತೀಶ್ ಕುಂಪಲ ಆಗ್ರಹಿಸಿದರು.
ಧರ್ಮಸ್ಥಳ ಕ್ಷೇತ್ರ ಜಗತ್ತಿನ ದೊಡ್ಡ ದೇವಸ್ಥಾನ ಅದಕ್ಕೆ ಯಾವುದೇ ಅಪಚಾರ ಆಗಬಾರದು. ಹಿಂದೂ ಧಾರ್ಮಿಕ ನಂಬಿಕೆಗೆ ತೊಂದರೆಯಾಗಬಾರದು ಎಂದರು.
ಸುದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪಕ್ಷದ ಧುರೀಣರಾದ ಸಂಜಯ್ ಪ್ರಭು, ಅರುಣ್ ಶೇಟ್, ಮಹೇಶ್ ಜೋಗಿ, ವಸಂತ ಜೆ ಪೂಜಾರಿ, ಸುಧಾಕರ, ಯತೀಶ್ ಅರ್ವರ್ ಉಪಸ್ಥಿತರಿದ್ದರು.