×
Ad

ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಸಂವಿಧಾನ ವಿರೋಧಿ ಕೃತ್ಯ: ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆರೋಪ

Update: 2025-05-06 13:27 IST

ಮಂಗಳೂರು, ಮೇ 6: ರಾಜ್ಯದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ನಡೆಸಲು ಆರಂಭಿಸಲಾಗಿರುವ ಸಮೀಕ್ಷೆ ಹೆಸರಿನಲ್ಲಿ ಸಂವಿಧಾನ ಹಾಗೂ ಕಾನೂನು ಉಲ್ಲಂಘನೆ ಕಾರ್ಯ ನಡೆಯುತ್ತಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ರಾಜ್ಯದಲ್ಲಿ ಸಾಕಷ್ಟು ಕಡೆ ಪರಿಶಿಷ್ಟ ಜಾತಿಗಳ ಜನರು ಕ್ರೈಸ್ತ ಅಥವಾ ಇಸ್ಲಾಂ ಧರ್ಮಗಳಿಗೆ ಮತಾಂತರ ಆಗಿದ್ದಾರೆ. ಇದೀಗ ಒಳ ಮೀಸಲಾತಿ ಸಮೀಕ್ಷೆಯ ನೇತೃತ್ವ ವಹಿಸಿರುವ ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನದಾಸ್‌ರವರು ಇತೀಚೆಗೆ ನೀಡಿರುವ ಟಿವಿ ಸಂದರ್ಶನವೊಂದರಲ್ಲಿ, ಧರ್ಮದ ಆಚರಣೆಯಲ್ಲಿ ಕ್ರೈಸ್ತರಾಗಿಯೂ, ಸರಕಾರದ ಅನುಕೂಲಗಳನ್ನು ಪಡೆಯಲು ಪರಿಶಿಷ್ಟ ಜಾತಿ ಎಂದು ಬರೆಸಿಕೊಂಡರೂ ಪರಿಶಿಷ್ಟ ಜಾತಿಯನ್ನಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿರುವುದು ಸಂವಿಧಾನ ಮತ್ತು ಕಾನೂನು ಬಾಹಿರ ಎಂದರು.

ಕಾನೂನು ಬಾಹಿರವಾಗಿ ಪರಿಶಿಷ್ಟ ದಾತಿಯ ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದು ಸರಕಾರ ಮತ್ತು ಪರಿಶಿಷ್ಟ ಜಾತಿಗಳ ಜನರಿಗೆ ವಂಚಿಸುತ್ತಿರುವವರನ್ನು ಸಮರ್ಥಿಸುವ ಮಾತು ಇದಾಗಿದ್ದು, ಸಮೀಕ್ಷೆಯ ಹೆಸರಿನಲ್ಲಿ ಅವರಿಗೆ ಅಕ್ರಮವಾಗಿ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವ ದುರುದ್ದೇಶದಿಂದ ಕೂಡಿದೆ ಎಂದು ಅವರು ಆರೋಪಿಸಿದರು.

ಆಯೋಗದ ಅಧ್ಯಕ್ಷರು ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿ ನೀಡಿದ್ದು, ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯದ ಸುಮಾರು 59000 ಸರಕಾರಿ ನೌಕರರು ರಾಜ್ಯದ ಪರಿಶಿಷ್ಟ ಜಾತಿಗಳ ಜನರ ಸಂವಿಧಾನ ಬದ್ಧ ಅವಕಾಶಗಳನ್ನು, ಸೌಲಭ್ಯಗಳನ್ನು ಇತರ ಜನರಿಗೆ ಕಾನೂನು ಬಾಹಿರವಾಗಿ ಅನುಭವಿಸಲು ಅನುವು ಮಾಡಿಕೊಡಲು ತಮ್ಮ ಅಧಿಕಾರ ಬಳಸುವಂತಾಗಿದೆ. ಆಯೋಗದ ಅಧ್ಯಕ್ಷರ ಮಾತು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯ್ದೆ 1989 (ತಿದ್ದುಪಡಿಗಳ ಸಹಿತ) ಸೆಕ್ಷನ್ 3 (1) (ಕ್ಯೂ) ಮತ್ತು (ಯು) ಹಾಗೂ ಸೆಕ್ಷನ್ 3(2) (ಗಿI) ಮತ್ತು (ಗಿII)ಅನ್ವಯ ಶಿಕ್ಷಾರ್ಹ ಅಪರಾಧ. ಈಗಾಗಲೇ ಡಿಆರ್‌ಇಸಿ ಎಸ್ಪಿಯವರಿಗೆ ಈ ಬಗ್ಗೆ ದೂರು ನೀಡಲಾಗಿದೆ. ರಾಜ್ಯ ಸರಕಾರ ಆಯೋಗವನ್ನು ನಿರ್ವಹಿಸುತ್ತಿರುವ ನೋಡಲ್ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ, ಆಯೋಗದ ಅಧ್ಯಕ್ಷ ಈ ಹೇಳಿಕೆ ಬಗ್ಗೆ ಅಧಿಕೃತ ಸ್ಪಷ್ಟನೆ ಮೂಲಕ ‘ಆಕ್ಷೇಪಾರ್ಹ ತಪ್ಪು ಹೇಳಿಕೆ’ ಎಂದು ತಿರಿಸಕ್ಕರಿಸಬೇಕು. ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಯಾರೂ ಅವರಲ್ಲಿ ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಇರಲಿ ಅಥವಾ ಇಲ್ಲದಿರಲಿ, ಅವರು ಪರಿಶಿಷ್ಟ ಜಾತಿಯವರು ಅಲ್ಲ. ಅವರನ್ನು ಈ ಸಮೀಕ್ಷೆಗೆ ಒಳಪಡಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಧರ್ಮದ ಹೆಸರು ನಮೂದಿಸಲು ಅಗತ್ಯವಾದ ಪ್ರತ್ಯೇಕ ಕಾಲಂ ಅನ್ನು ಸೇರಿಸಲು ತುರ್ತು ತಾಂತ್ರಿಕ ಕ್ರಮ ಕೈಗೊಂಡು ನೈಜ ಪರಿಶಿಷ್ಟ ಜಾತಿಗಳ ಜನರ ಧರ್ಮ ಯಾವುದು ಎಂಬುದನ್ನು ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಇದಲ್ಲದೆ ಆಯೋಗದ ಅಧ್ಯಕ್ಷರು ಇನ್ನೊಂದು ಸಂವಿಧಾನ ವಿರೋಧಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪರಿಶಿಷ್ಟ ಜಾತಿಗಳೆಂದು ರಾಜ್ಯದಲ್ಲಿ ಅಧಿಸೂಚಿತ ಕೊಂಡಿರುವ 101 ಜಾತಿಗಳ ಪೈಕಿ ಕ್ರಮ ಸಂಖ್ಯೆ 1, 2 ಮತ್ತು 3ರಲ್ಲಿ ಅನುಕ್ರಮವಾಗಿ ಪಟ್ಟಿ ಮಾಡಲಾಗಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಹೆಸರಿನ ಜಾತಿಗಳನ್ನು ಇವುಗಳು ಜಾತಿಗಳಲ್ಲಿ ವಿವಿಧ ಜಾತಿಗಳನ್ನು ಒಳಗೊಂಡ ಒಂದೊಂದು ಗುಂಪು ಸಮೀಕ್ಷೆಯ ವೇಳೆ ಜನ ತಮ್ಮ ಮೂಲ ಜಾತಿಯ ಹೆಸರು ಹೇಳಬೇಕು ಎಂದು ತಿಳಿಸಿದ್ದಾರೆ. ಈ ಮೂರು ಜಾತಿಗಳು 1950ರಲ್ಲಿ ರಾಷ್ಟ್ರಪತಿಗಳು ಹೊರಡಿಸಿರುವ ಅಧಿಸೂಚನೆಯಲ್ಲಿಯೇ ಜಾತಿಗಳು ಎಂದು ಪರಿಗಣಿಸಲಾಗಿದೆ. ನಂತರದ ಎಲ್ಲ ತಿದ್ದುಪಡಿಗಳ ಸಂದರ್ಭದಲ್ಲಿಯೂ ಜಾತಿಗಳು ಎಂದೇ ಪರಿಗಣಿಸಲಾಗಿದೆ. ಇದೀಗ ಸಮೀಕ್ಷೆಯಲ್ಲಿ ಸಂಕೇತ ಸಂಖ್ಯೆಗಳೊಂದಿಗೆ ಉಲ್ಲೇಖಿಸಲಾಗಿರುವ ಮೂರು ಜಾತಿಗಳ ಹೆಸರನ್ನು ಜಾತಿ ಪಟ್ಟಿಯಿಂದ ತೆಗೆದು ಹಾಕಿರುವುದು ಸಂವಿಧಾನ ವಿರೋಧಿ ಕ್ರಮ. ಹಾಗಾಗಿ ಈ ಅಕ್ರಮಗಳ ವಿರುದ್ಧ ಅಗತ್ಯ ತುರ್ತು ಕ್ರಮ ಕೈಗೊಳ್ಳುವವರೆಗೆ ಸಮೀಕ್ಷೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಕಾಂತಪ್ಪ ಅಲಂಗಾರು, ಅನಿಲ್ ಕಂಕನಾಡಿ, ಪ್ರದೀಪ್ ಕಾಪಿಕಾಡು, ಸುಂದರ ಮೇರ, ಅಶೋಕ್ ಕೊಂಚಾಡಿ, ಮೋಹನಾಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News