ಎಡಪದವು: ಚಾಕುವಿನಿಂದ ದನಕ್ಕೆ ಇರಿತದ ಗಾಯ; ಸ್ವಯಂ ಪ್ರೇರಿತ ಪ್ರಕರಣ ದಾಖಲು
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಬೀದಿ ಬದಿ ಚಾಕುವಿನಿಂದ ದನಕ್ಕೆ ಇರಿತದ ಗಾಯವಾದ ಘಟನೆ ರವಿವಾರ ನಡೆದಿದೆ. ಈ ಬಗ್ಗೆ ಅಂಗಡಿಯ ಮಾಲಕ ಮತ್ತು ದನದ ಮಾಲಕನ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಎಡಪದವು ಬಳಿ ಬೀದಿ ಬದಿಯ ಅಂಗಡಿಯೊಂದರಲ್ಲಿ ಅಯ್ಯಪ್ಪ ಮಾಲಧಾರಿಗಳು ಸಾಮಗ್ರಿ ಖರೀದಿಸುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ದನ ಅಂಗಡಿ ಸಾಮಗ್ರಿಗಳನ್ನು ತಿನ್ನಲು ಯತ್ನಿಸಿದೆ. ತಕ್ಷಣ ಅಂಗಡಿ ವ್ಯಾಪಾರಿ ತನ್ನ ಕೈಯಲ್ಲಿದ್ದ ತರಕಾರಿ ಕತ್ತರಿಸಲು ಬಳಸುವ ಚಾಕು ತೋರಿಸಿ ದನವನ್ನು ಓಡಿಸಲು ಯತ್ನಿಸಿದ್ದು, ಈ ವೇಳೆ ದನದ ಮುಖಕ್ಕೆ ಇರಿಯಲ್ಪಟ್ಟು ಗಾಯವಾಗಿದೆ.
ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿ ಕೊಳ್ಳುವುದು ಅದರ ಮಾಲಕರ ಕರ್ತವ್ಯವಾಗಿದೆ. ಅದಲ್ಲದೆ ಜಾನುವಾರುಗಳ ಮೇಲೆ ಕ್ರೌರ್ಯವನ್ನು ಎಸಗುವುದು ಕೂಡ ದಂಡನಾರ್ಹ ಅಪರಾಧವಾಗಿದೆ. ಹಾಗಾಗಿ ದನಕ್ಕೆ ಆಹಾರ ನೀಡದೆ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡಲು ಬಿಟ್ಟಿದ್ದ ದನದ ಮಾಲಕ ಮತ್ತು ದನಕ್ಕೆ ಇರಿದ ಆರೋಪದ ಮೇಲೆ ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಬೀದಿಬದಿ ಅಂಗಡಿಯ ಮಾಲಕನ ವಿರುದ್ಧ ಬಜ್ಪೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.