ಮಂಗಳೂರು ವಿಶ್ವವಿದ್ಯಾನಿಲಯ–ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡುವೆ ಶೈಕ್ಷಣಿಕ ಒಪ್ಪಂದ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ನಡುವಿನ ಶೈಕ್ಷಣಿಕ, ಸಂಶೋಧನಾ ಹಾಗೂ ಸಾಂಸ್ಕೃತಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಶೈಕ್ಷಣಿಕ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಡಿಯಲ್ಲಿ ಸ್ಥಾಪಿತವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರಿನ ಇನೋಳಿ ಪ್ರದೇಶದಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ, ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಈ ಒಪ್ಪಂದದಡಿ ಹಲವು ಶೈಕ್ಷಣಿಕ ಹಾಗೂ ವೃತ್ತಿಪರ ಉಪಕ್ರಮಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸಲಿವೆ.
ಈ ಒಪ್ಪಂದವು ಜಾಗತಿಕ ಶೈಕ್ಷಣಿಕ ಉಪಕ್ರಮಗಳಿಗೆ ಹೊಂದಿಕೆಯಾಗಿದ್ದು, ಕರ್ನಾಟಕ–ವೇಲ್ಸ್ ವಿಶ್ವವಿದ್ಯಾಲಯಗಳ ಪಾಲುದಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ಲೋಬಲ್ ವೇಲ್ಸ್ ಪ್ರೋಗ್ರಾಂ ಸೇರಿದಂತೆ, ಕರ್ನಾಟಕ ಮತ್ತು ವೇಲ್ಸ್ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ನಡುವಿನ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಈ ಒಪ್ಪಂದದಡಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು, ವೃತ್ತಿಪರ ಮತ್ತು ವಿದ್ಯಾರ್ಥಿ ವಿನಿಮಯ ಉಪಕ್ರಮಗಳು, ಜಂಟಿ ಸಂಶೋಧನಾ ಚಟುವಟಿಕೆಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ಸಹಯೋಗದ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಸಹಯೋಗದ ಪ್ರಮುಖ ಅಂಶವಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI) ಕುರಿತ ಸಂಶೋಧನಾ ಕ್ಲಸ್ಟರ್ ಸ್ಥಾಪನೆಗೂ ಒಪ್ಪಂದದಲ್ಲಿ ಒತ್ತು ನೀಡಲಾಗಿದೆ.
ಬೌದ್ಧಿಕ ಆಸ್ತಿ ಕಾನೂನು(intellectual property laws) ಅನ್ವಯವಾಗುವಂತೆ ಶೈಕ್ಷಣಿಕ ಸಾಮಗ್ರಿಗಳು, ಸಂಶೋಧನಾ ಪ್ರಕಟಣೆಗಳು ಹಾಗೂ ಶೈಕ್ಷಣಿಕ ಸಂಪನ್ಮೂಲಗಳ ವಿನಿಮಯಕ್ಕೂ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳಿಗಾಗಿ ಅಲ್ಪಾವಧಿಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಒಪ್ಪಂದದ ಭಾಗವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಧರ್ಮ, ಈ ಒಪ್ಪಂದದಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ದೀರ್ಘಕಾಲೀನ ಪ್ರಯೋಜನ ಸಿಗಲಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಮಾನ್ಯತೆ, ಜಂಟಿ ಸಂಶೋಧನೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಯತ್ತ ಹೊಸ ಅವಕಾಶಗಳು ಈ ಒಪ್ಪಂದದಿಂದ ಸೃಷ್ಟಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ನಿರ್ದೇಶಕ ಡಾ. ಎಸ್. ಐ. ಮಂಜುರ್ ಬಾಷಾ, ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕಾ-ಆಧಾರಿತ ಕಲಿಕೆಯನ್ನು ಉತ್ತೇಜಿಸುವಲ್ಲಿ ಬ್ಯಾರೀಸ್ ಸಂಸ್ಥೆಗಳ ಸಮೂಹ ನೀಡುತ್ತಿರುವ ಕೊಡುಗೆಗಳನ್ನು ವಿವರಿಸಿದರು.
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಕಮಲಕಣ್ಣನ್ ಸಿ, ಒಪ್ಪಂದ(MoU) ದ ಸಂಶೋಧನಾ ಅಂಶಗಳನ್ನು ವಿವರಿಸಿ, ಅಂತರಶಿಸ್ತೀಯ ಸಂಶೋಧನೆ, ನಾವೀನ್ಯತೆ ಹಾಗೂ ಸುಸ್ಥಿರ ತಾಂತ್ರಿಕ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು.
ಬಿಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ, ಸಭೆಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ನಾವೀನ್ಯತೆ, ಸಂಶೋಧನಾ ಸಂಸ್ಕೃತಿ ಹಾಗೂ ಜಾಗತಿಕ ಸಾಮರ್ಥ್ಯವನ್ನು ಬೆಳೆಸುವಲ್ಲಿ ಫಲಿತಾಂಶ–ಆಧಾರಿತ ಶಿಕ್ಷಣ ಮತ್ತು MoUನ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಡೀನ್, ಎಂಬಿಎ ವಿಭಾಗದ ಡೀನ್ ಸೇರಿದಂತೆ ಎರಡೂ ಸಂಸ್ಥೆಗಳ ಹಿರಿಯ ಅಧ್ಯಾಪಕರು ಉಪಸ್ಥಿತರಿದ್ದರು.