×
Ad

ಇನೋಳಿ: ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳ ಕುರಿತು ತರಬೇತಿ ಕಾರ್ಯಾಗಾರ

Update: 2025-10-12 17:21 IST

ಕೊಣಾಜೆ: ಇನೋಳಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿರುವ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಸಂಸ್ಥೆಯ ಆಶ್ರಯದಲ್ಲಿ 'ಭಾರತೀಯ ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ' ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವು ರವಿವಾರ ಇನೋಳಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಬ್ಯಾರಿ, "ಪ್ರತೀ ಉದ್ಯೋಗವೂ ವೇತನದೊಂದಿಗೆ ಅನುಭವಗಳನ್ನೂ ಕೊಡುತ್ತದೆ. ಆದರೆ ಸೇನೆಯಲ್ಲಿ ಅಥವಾ ರಕ್ಷಣಾ ವಲಯದಲ್ಲಿ ನಾವು ಉದ್ಯೋಗದಲ್ಲಿದ್ದರೆ ರಾಷ್ಟ್ರಸೇವೆಯ ಅವಕಾಶ, ಅನುಭವದೊಂದಿಗೆ ಗೌರವವೂ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳ ಕುರಿತು ಅರಿವನ್ನು ಹೆಚ್ಚಿಸಿಕೊಳ್ಳಬೇಕು" ಎಂದು ಹೇಳಿದರು.

ಸೇನೆಯಲ್ಲಿರುವವರು ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲ ದೇಶಕ್ಕೆ ನೆರೆಹಾನಿ, ಭೂಕಂಪದಂತಹ ಹಾನಿ ಎದುರಾದರೂ‌ ದೇಶ ಸೇವೆಗೆ ತೊಡಗಿಸಿಕೊಳ್ಳುತ್ತಾರೆ. ಸೇನೆಯಲ್ಲಿರುವ ವ್ಯಕ್ತಿಯನ್ನು ಮತ್ತು ಕುಟುಂಬವನ್ನು ಸಮಾಜ ಗೌರವದಿಂದ ಕಾಣುತ್ತದೆ. ಸೇನೆಯ ವೃತ್ತಿಯಿಂದ ಶಿಸ್ತುಬದ್ದ ಜೀವನವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಸೇನೆಯಲ್ಲಿ ಕೊಡಗಿನವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಮಂಗಳೂರಿಗರು ಕಡಿಮೆ. ಮಹಿಳೆಯರಿಗೂ ಇತ್ತೀಚೆಗೆ ಉತ್ತಮ ಅವಕಾಶಗಳು ಇವೆ. ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಸೇನಾ ವಲಯದ ಅವಕಾಶಗಳ ಬಗ್ಗೆ ಜ್ಞಾನವನ್ನು ಅರಿಯುವ ಪ್ರಯತ್ನ ಮಾಡುವುದು ಅತ್ಯಗತ್ಯ ಎಂದರು.

ಸೇನೆಯಲ್ಲಿ ವಿಪುಲ ಅವಕಾಶ: ಅನೀಸ್ ಕುಟ್ಟಿ

ಪುಣೆಯ ಅನೀಸ್ ಡಿಫೆನ್ಸ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕ ಅನೀಸ್ ಕುಟ್ಟಿ ಮಾತನಾಡಿ, ದೇಶದ ರಕ್ಷಣಾ ವಲಯದಲ್ಲಿ ಸೇವೆ ಮಾಡುವುದಕ್ಕೆ ಯುವ ಸಮುದಾಯಕ್ಕೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ಸಮುದಾಯ ರಕ್ಷಣಾ ವಲಯದ ವಿವಿಧ ಕ್ಷೇತ್ರಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ತರಬೇತಿ ಪಡೆದು ದೇಶ ಸೇವೆಗೆ ಮುಂದಾಗಬೇಕು ಎಂದರು.

ಸೇನೆಯ ಫ್ಲೈಯಿಂಗ್ ಬ್ರಾಂಚ್ ( ವಾಯುಸೇನೆ)ಯಲ್ಲಿ ಪೈಲೆಟ್ ಆಗಿ, ನ್ಯಾವಿಗೇಟರಾಗಿ, ಏರ್ ಆಪರೇಷನ್ ವಿಭಾಗದಲ್ಲಿ ಅವಕಾಶಗಳಿದ್ದರೆ, ಟೆಕ್ನಿಕಲ್ ಬ್ರಾಂಚ್ ನಲ್ಲಿ ಇಂಜಿನಿಯರ್ ಗಳಿಗ, ವೆಪನ್ ಹಾಗೂ ಸಿಸ್ಟಮ್ ಮೈನ್ಟೆನೆನ್ಸ್ ವಿಭಾಗದಲ್ಲಿ ಹಾಗೂ ಗ್ರೌಂಡ್ ಡ್ಯೂಟಿ ವಿಭಾಗದಲ್ಲಿ ಲಾಜಿಸ್ಟಿಕ್, ಆಡಳಿತವಿಭಾಗದಲ್ಲಿ, ಅಕೌಂಟ್ ಹಾಗೂ‌ ಶೈಕ್ಷಣಿಕ ವಿಭಾಗದಲ್ಲಿ ವಿಪುಲ ಅವಕಾಶಗಳಿವೆ. ಆದರೆ ಆಯಾ ಕ್ಷೇತ್ರದ ಅನುಭವದೊಂದಿಗೆ ಅಯಾ ವಿಭಾಗದಲ್ಲಿ ಪರೀಕ್ಷಾ ಪೂರ್ವ ತರಬೇತಿಯೊಂದಿಗೆ ಪರೀಕ್ಷೆ ಬರೆದು, ಸಂದರ್ಶನ ಎದುರಿಸಿ ಸೇನಾ ವಲಯದಲ್ಲಿ ಉದ್ಯೋಗದ ಅವಕಾಶ ಪಡೆದುಕೊಳ್ಳಬಹುದು ಎಂದರು. ಬ್ಯಾರೀಸ್ ಶಿಕ್ಷಣ ಸಂಸ್ಥೆಯು ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದರು.

ತರಬೇತಿ‌ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು‌. ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಅನೀಸ್ ಕುಟ್ಟಿ ಅವರು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಸೇರ್ಪಡೆಗೆ ಅಗತ್ಯವಿರುವ ಎನ್ ಡಿಎ, ಸಿಡಿಎಸ್, ಎಎಫ್ ಸಿಎಟಿ ಮುಂತಾದ ಪ್ರಮುಖ ರಕ್ಷಣಾ ಪ್ರವೇಶ ಪರೀಕ್ಷೆಗಳ ಅರ್ಹತಾ ಮಾನದಂಡಗಳು, ತಯಾರಿ ವಿಧಾನಗಳು ಹಾಗೂ ಮಾನಸಿಕ ದೃಢತೆಯ ಬಗ್ಗೆ ಮಾಹಿತಿ ನೀಡಲಾಯಿತು.

ಪುಣೆಯ ಅನೀಸ್ ಡಿಫೆನ್ಸ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ. ಸಾದಾತ್, ಪಿಯು ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಲತೀಫ್, ಕಾರ್ಯಕ್ರಮ ಸಂಯೋಜಕರಾದ ಪ್ರೊ. ಮುಹಮ್ಮದ್ ಸಿನಾನ್,‌ ಡಾ. ಆಸಿಫ್‌ ಬ್ಯಾರಿ, ಮುಹಮ್ಮದ್ ರಶೀದ್ ಮೊದಲಾದವರು ಉಪಸ್ಥಿತರಿದ್ದರು.

ಬಿಐಟಿ ಪ್ರಾಂಶುಪಾಲರಾದ ಡಾ.ಮಂಜೂರ್ ಬಾಷಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News