×
Ad

ಡಿಕೆಶಿ ಪರ ಜೈಕಾರ : ಕಾಂಗ್ರೆಸ್‌ನಲ್ಲಿ ‘ನೋಟಿಸ್’ ಗೊಂದಲ !

Update: 2025-12-05 19:58 IST

ಸಾಂದರ್ಭಿಕ ಚಿತ್ರ | Photo Credit : PTI

ಮಂಗಳೂರು,ಡಿ.5: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬೆಂಬಲಿಗರು ಉಪಮುಖ್ಯ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಮುಜುಗರವನ್ನುಂಟು ಮಾಡಿದ ಘಟನೆಗೆ ಸಂಬಂಧಿಸಿ ಮಿಥುನ್ ರೈಗೆ ಎಐಸಿಸಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ.

ನೋಟಿಸ್ ಜಾರಿಯಾದ ವಿಚಾರವನ್ನು ದೃಢಪಡಿಸಲು ಸುದ್ದಿಗಾರರು ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರಲ್ಲೂ ನೋಟಿಸ್ ಬಗ್ಗೆ ಮಾಹಿತಿ ಇಲ್ಲ.

ಮಿಥುನ್ ರೈ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಯಾರೂ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿದ್ದರಿಲ್ಲ.

ಮಿಥುನ್ ರೈ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾದ ಕರ್ನಾಟಕದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ರೋಜಿ ಎಂ.ಜಾನ್ ಅವರನ್ನು ವಾರ್ತಾ ಭಾರತಿ ಸಂಪರ್ಕಿಸಿದಾಗ‘ ನೀವು ಕೆಪಿಸಿಸಿಯನ್ನು ಸಂಪರ್ಕಿಸಿ .. ಅವರು ಸ್ಪಷ್ಟನೆ ನೀಡುತ್ತಾರೆ’ ಎಂದಷ್ಟೇ ಉತ್ತರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಈ ಬಗ್ಗೆ ತಮಗೇನು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರನ್ನು ಈ ಸಂಬಂಧ ಸುದ್ದಿಗಾರರು ಸಂಪರ್ಕಿಸಲು ಯತ್ನಿಸಿದರೂ, ಫಲಕಾರಿಯಾಗಲಿಲ್ಲ. ಅವರು ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಸಿಎಂ ಹಾಗೂ ವೇಣುಗೋಪಾಲ್ ಎದುರು ಡಿಕೆ ಡಿಕೆ ಅಂತ ಘೋಷಣೆ ಕೂಗಿರುವ ವಿಚಾರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ‘ ಅಭಿಮಾನಿಗಳು ಘೋಷಣೆ ಕೂಗಿರಬಹುದು. ರಾಜಕೀಯದಲ್ಲಿ ಎಲ್ಲಾ ತರಹದ ಜೈಕಾರ, ಧಿಕ್ಕಾರ ಇರುತ್ತೆ. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ, ಇನ್ನು ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ ’ ಎಂದು ಸಮರ್ಥಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News