ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ಇಂಡಿಗೋ ವಿಮಾನಗಳ ಹಾರಾಟ ರದ್ದು
ಪ್ರಯಾಣಿಕರ ಪರದಾಟ
ಮಂಗಳೂರು, ಡಿ.5: ದೇಶದ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯಾಗಿರುವ ಇಂಡಿಗೊ ಏರ್‌ಲೈನ್ಸ್‌ನ ಭಿಕ್ಕಟ್ಟು ಮುಂದುವರಿದಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 18 ವಿಮಾನಗಳ ಹಾರಾಟ ರದ್ದಾಗಿದೆ.
9 ನಿರ್ಗಮನದ ಮತ್ತು 9 ಆಗಮನದ ವಿಮಾನಗಳು ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ. 4 ವಿಮಾನಗಳು ಮಾತ್ರ ಕಾರ್ಯಚರಣೆ ನಡೆಸಿದ್ದು, ಈ ಪೈಕಿ 3 ವಿಮಾನಗಳ ನಿಗದಿತ ಸಮಯಕ್ಕಿಂತ 30 ನಿಮಿಷಗಳಷ್ಟು ವಿಳಂಬವಾಗಿ ಸಂಚರಿಸಿದೆ.
ಇಂಡಿಗೋದ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ಸ್ಥಗಿತದಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇಂಡಿಗೊ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಇತರ ವಿಮಾನಗಳ ಹಾರಾಟಕ್ಕೂ ಸ್ವಲ್ಪ ಮಟ್ಟಿನ ಅಡಚಣೆ ಉಂಟಾಗಿದೆ.
ಇಂಡಿಗೋದ ಸಮಸ್ಯೆಯ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಹಲವಾರು ಪ್ರಯಾಣಿಕ-ಕೇಂದ್ರಿತ ಕ್ರಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಸ್ವಯಂಚಾಲಿತವಾಗಿ ಟಿಕೆಟ್ ಹಣ ವಾಪಸ್ ನೀಡುವುದು. ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ವಸತಿ, ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಪ್ರವೇಶ ಮತ್ತು ವಿಳಂಬಿತ ಪ್ರಯಾಣಿಕರಿಗೆ ಉಪಹಾರಗಳ ವ್ಯವಸ್ಥೆ ಮಾಡಿದೆ. ಅಡಚಣೆಯ ನಡುವೆ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ವಿಮಾನ ನಿಲ್ದಾಣಗಳು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿವೆ.
ಇಂಡಿಗೋ ಭಿಕ್ಕಟ್ಟಿನಿಂದ ತೊಂದರೆ ಅನುಭವಿಸಿರುವ ಪ್ರಯಾಣಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಪ್ರಯತ್ನಗಳಿಗೆ ಇಂಡಿಗೋ ಜೊತೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೈಜೋಡಿಸಿದೆ. ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಪ್ರಯಾಣಿಕರಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ಚಿಕಿತ್ಸೆ :
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಹಾರಾಟ ರದ್ದತಿಯಿಂದಾಗಿ ತೊಂದರೆ ಅನುಭವಿಸಿ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತಂಡವು ಚಿಕಿತ್ಸೆ ನೀಡಿತು.
30 ಹರೆಯದ ಪ್ರಯಾಣಿಕರೊಬ್ಬರು ವಿಮಾನಯಾನ ಕಾಯ್ದಿರಿಸುವಿಕೆ ಕೌಂಟರ್ ಹೊರಗೆ ತಲೆ ಸುತ್ತು ಮತ್ತು ಸಾಮಾನ್ಯ ದೌರ್ಬಲ್ಯದ ಬಗ್ಗೆ ದೂರು ನೀಡಿದರು. ವೈದ್ಯಕೀಯ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದಾರೆ.