×
Ad

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: ಸಹಕಾರ ಭಾರತಿಯ ವಿಜೇತ ಅಭ್ಯರ್ಥಿಗಳಿಗೆ ಕ್ಯಾಂಪ್ಕೊದಿಂದ ಅಭಿನಂದನೆ

Update: 2025-05-21 11:50 IST

ಮಂಗಳೂರು, ಮೇ 21: ಇತ್ತೀಚೆಗೆ ನಡೆದ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿಯ ವಿಜೇತ ಅಭ್ಯರ್ಥಿಗಳನ್ನು ಮಂಗಳೂರು ಮಹಾನಗರ ಜಿಲ್ಲೆ ಮತ್ತು ಸಹಕಾರ ಭಾರತಿ ದ.ಕ. ಜಿಲ್ಲೆಯ ವತಿಯಿಂದ ಸೋಮವಾರ ಕ್ಯಾಂಪ್ಕೊ ಸಭಾಭವನದಲ್ಲಿ ಅಭಿನಂದಿಸಲಾಯಿತು.

ಅಭಿನಂದನಾ ಭಾಷಣ ಮಾಡಿದ ಸಹಕಾರ ಭಾರತಿ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಮತ್ತು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಪದ್ಮನಾಭ ಕೊಂಕೋಡಿ ವಿಜೇತ ಎಲ್ಲಾ ಅಭ್ಯರ್ಥಿಗಳನ್ನು ಹಾಗೂ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಪ್ರಶಂಸಿಸಿದರು.

ನಿರ್ದೇಶಕರಾಗಿ ಆಯ್ಕೆಯಾದವರು, ಗೊ ಸಾಕಣೆದಾರರ ಸಂಕಷ್ಟ ಮತ್ತು ಅಹವಾಲುಗಳಿಗೆ ತುರ್ತು ಸ್ಪಂದಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಭಾರತಿಯ ಮಾಜಿ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ್ ಕೇಳ್ಕಾರ್ ಮಾತನನಾಡಿ, ಸಂಘಟನೆ ಬೆಳೆಯುವ ದೃಷ್ಟಿಯಿಂದ ಕೆಲವು ಬಾರಿ ತನ್ನ ಸ್ವಹಿತವನ್ನು ಬದಿಗಿಡುವ ಸಂದರ್ಭ ಬಂದಾಗಲೂ ಸದಸ್ಯರು ಸಂಘಟನೆಯ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಾರದು ಎಂದರು.

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಒಕ್ಕೂಟದ ನಿಕಟ ಪೂರ್ವ ನಿರ್ದೇಶಕ ನರಸಿಂಹ ಕಾಮತ್, ವಿಭಾಗ ಸಂಘಟನಾ ಪ್ರಮುಖ್ ಮೋಹನ್ ಕುಂಬ್ಲೇಕರ್ ಮಾತನಾಡಿ ಶುಭ ಹಾರೈಸಿದರು.

ಸಹಕಾರ ಭಾರತಿ ದ.ಕ. ಜಿಲ್ಲಾ ಅಧ್ಯಕ್ಷ ಹಾಗೂ ಒಕ್ಕೂಟ ನಿರ್ದೇಶಕ ಸುಧಾಕರ ರೈಯವರು, ದ.ಕ ಹಾಲು ಒಕ್ಕೂಟದ ಚುನಾವಣಾ ಸಂದರ್ಭ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಸಂಘ ಹಾಗೂ ಸಹಕಾರ ಭಾರತಿಯ ವರಿಷ್ಠರು ಮತ್ತು ಭಾರತೀಯ ಜನತಾ ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಹಾಲು ಒಕ್ಕೂಟದ ಚುನಾವಣಾ ಅಭ್ಯರ್ಥಿ ಹಾಗೂ ನಿಕಟ ಪೂರ್ವ ನಿರ್ದೇಶಕಿ, ಸಹಕಾರ ಭಾರತಿ ದ.ಕ. ಜಿಲ್ಲಾ ಮಹಿಳಾ ಪ್ರಮುಖ್ ಸುಭದ್ರಾ ರಾವ್ ತನ್ನ ಅನುಭವ ಹಂಚಿಕೊಂಡು, ವೈಯಕ್ತಿಕ ಸೋಲು ಗೆಲುವುಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸುವಂತೆ ಕರೆ ನೀಡಿದರು.

ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷ ಜಿ.ಆರ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಯಾನಂದ ಅಡ್ಯಾರ್ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News