ದ.ಕ.ಜಿಲ್ಲೆಯಲ್ಲಿ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚಾಗಲಿ : ಜಿಲ್ಲಾಧಿಕಾರಿ ದರ್ಶನ್
ಸರ್ವಧರ್ಮ ಕ್ರಿಸ್ಮಸ್ ಆಚರಣೆ
ಮಂಗಳೂರು, ಡಿ.22: ಸಮಾಜದಲ್ಲಿ ಜನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಲು ಸಾಮರಸ್ಯ ಬೇಕು. ಎಲ್ಲಾ ಧರ್ಮದ, ಸಂಘಟನೆಗಳ ಪ್ರತಿನಿಧಿಗಳು ಇಲ್ಲಿ ಒಂದೆಡೆ ಸೇರಿ ಕ್ರಿಸ್ಮಸ್ ಆಚರಿಸುತ್ತಿರುವುದು ಔಚಿತ್ಯರ್ಪೂವಾಗಿದೆ. ದ.ಕ.ಜಿಲ್ಲೆಯ ಮಟ್ಟಿಗೆ ಇಂತಹ ಸೌಹಾರ್ದಯುತ ಕಾರ್ಯಕ್ರಮಗಳು ಹೆಚ್ಚಾಗಬೇಕು. ಇದರಿಂದ ಜಿಲ್ಲಾಡಳಿತಕ್ಕೂ ಒತ್ತಡ ಕಡಿಮೆ ಆಗಲಿದೆ ಎಂದು ದ.ಕ.ಜಿಲ್ಲಾಧಿಕಾರಿ ದರ್ಶನ್ ಹೇಳಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ನೇತೃತ್ವದಲ್ಲಿ ನಗರದ ಜೆಪ್ಪುಸಂತ ಅಂತೋನಿ ಆಶ್ರಮದಲ್ಲಿ ಸೋಮವಾರ ನಡೆದ 11ನೇ ವರ್ಷದ ಸರ್ವಧರ್ಮ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತದ ಬಿಷಪ್ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಕ್ರಿಸ್ಮಸ್ ಅಂದರೆ ಪ್ರೀತಿ, ಶಾಂತಿ, ಭರವಸೆಯಾಗಿದೆ. ದೇವ ಮತ್ತು ಮನುಜರ ಹಬ್ಬವಾಗಿದೆ. ಭಾವನೆಗಳ ಸಂಗಮವಾಗಿದೆ. ಪ್ರೀತಿಯ ನೈಜ ಅರ್ಥವೇ ಕ್ರಿಸ್ಮಸ್ ಆಗಿದೆ. ಪ್ರೀತಿ ಇದ್ದಲ್ಲಿ ದೇವರು ಇರ್ತಾರೆ ಎಂಬ ನಂಬಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ, ಶ್ರೀ ರಾಮಕೃಷ್ಣ ಮಠದ ಯುಗೇಶಾನಂದ ಸ್ವಾಮೀಜಿ, ಸಂತ ಅಂತೋನಿ ಆಶ್ರದಮದ ನಿರ್ದೇಶಕ ರೆ.ಫಾ. ಜೆ.ಬಿ. ಕ್ರಾಸ್ತ, ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಶುಭ ಹಾರೈಸಿದರು.
ಯೆನೆಪೊಯ ವಿವಿಯ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ, ಮಾಜಿ ರಾಜ್ಯಸಭಾ ಸದಸ್ಯ ವಿ ಇಬ್ರಾಹಿಂ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಲೆಟ್ ಪಿಂಟೊ, ಭಾಸ್ಕರ ಕೆ., ನಾಗೇಂದ್ರ ಕುಮಾರ್ ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸುರೇಂದ್ರ ಕಾಂಬಳಿ, ಮುಖಂಡರಾದ ಬ್ಲೋಸಂ ಫೆರ್ನಾಂಡಿಸ್, ಡಾ.ಕವಿತಾ ಡಿಸೋಜ, ಜಯರಾಮ ಶೇಖ, ಚೇತನ್ ಬೆಂಗರೆ, ಕೇಶವ ಮರೋಳಿ, ಅಬ್ದುಲ್ ಸಲೀಂ, ಎಂಪಿ ನೊರೊನ್ಹ, ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿ, ಶಾಸಕ ಐವನ್ ಡಿಸೋಜ ಸ್ವಾಗತಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಮೇಯರ್ ಶಶಿಧರ ಹೆಗ್ಡೆ ವಂದಿಸಿದರು.