×
Ad

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಡಿಸಿಎಂ ಭೇಟಿ, ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ

Update: 2025-10-02 09:48 IST

ಮಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ದೇವರ ಬಲಿ ಉತ್ಸವದ ಶುಭ ಸಂಧರ್ಭದಲ್ಲಿ ದೇವಸ್ಥಾನ ಪ್ರವೇಶಿಸಿದ ಉಪಮುಖ್ಯಮಂತ್ರಿ, ಸಂಪ್ರದಾಯದಂತೆ ದೇವರ ರಥಾರೋಹಣ ನಂತರ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು, ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿಯಾದರು. ದೇವಳ ಸ್ಥಾಪಿಸಿದ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ನಮಿಸಿ, ಸರ್ವ ದೇವರ ದರ್ಶನ ಪಡೆದು, ದರ್ಬಾರ್ ಮಂಟಪದಲ್ಲಿ ಶಾರದೆ ಮತ್ತು ನವದುರ್ಗೆಯರಿಗೆ ವಂದಿಸಿದರು. ಈ ವೇಳೆ ಉಪಮುಖ್ಯಮಂತ್ರಿಗೆ ಪ್ರಸಾದ ನೀಡಿ, ದೇವಳದ ವತಿಯಿಂದ ಗೌರವಿಸಲಾಯಿತು.

 

ಬಳಿಕ ಮಾತನಾಡಿದ ಅವರು, ನಾನು ಇಂದು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸಾಕ್ಷಾತ್ ಶಾರದಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಂತಿದೆ. ಶ್ರೀ ನಾರಾಯಣ ಗುರು ಸ್ಥಾಪಿಸಿದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ ಮಂಗಳೂರು ದಸರಾ ವೈಭವ ಕಂಡು ಬಹಳ ಸಂತೋಷವಾಯಿತು ಎಂದರು.

ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಮಾಲಾರ್ಪಣೆಗೈದು ಸ್ವಾಗತಿಸಿದರು.

 

ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಪಿ.ಕೆ.ಗೌರವಿ, ದೀಪಕ್ ಪೂಜಾರಿ ಹಾಗೂ ಸಮಿತಿ ಸದಸ್ಯರು, ಶಾಸಕರಾದ ಅಶೋಕ್ ಕುಮಾರ್ ರೈ, ಎಂ.ಎಲ್. ಸಿ. ಮಂಜುನಾಥ ಭಂಡಾರಿ, ರಕ್ಷಿತ್ ಶಿವರಾಂ ಬೆಳ್ತಂಗಡಿ, ಇನಾಯತ್ ಅಲಿ, ಶ್ರೀನಿವಾಸ್ ಬಿ.ವಿ., ದೇವಳದ ಆಡಳಿತ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News