ಧರ್ಮಸ್ಥಳ ಪ್ರಕರಣ | ದೂರುದಾರ ತೋರಿಸಿದ ಹೊಸ ಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯ
ಖಾಸಗಿ ಸ್ಥಳದಲ್ಲಿ ಕಾರ್ಯಾಚರಣೆಗೆ ಸಿದ್ಧತೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರ ತೋರಿಸಿದ ಹೊಸ ಸ್ಥಳದಲ್ಲಿ ಇಂದು ಶೋಧ ಕಾರ್ಯ ನಡೆಸಲು ಎಸ್.ಐಟಿ ಮುಂದಾಗಿದೆ.
ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ನ ಒಳಗೆ ಶೋಧ ಕಾರ್ಯಕ್ಕಾಗಿ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನೊಂದಿಗೆ ತೆರಳಿದ್ದಾರೆ.
ನೇತ್ರಾವತಿ ನದಿ ಬದಿಯಲ್ಲಿರುವ ಈ ಪ್ರದೇಶದಲ್ಲಿ ನದಿ ತೀರದಲ್ಲೇ ಈತ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಖಾಸಗಿ ಜಾಗದ ಗೇಟ್ ದಾಟಿ ಹೋಗಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿದ ಎಸ್ಐಟಿ ಅಧಿಕಾರಿಗಳು ಅವರಿಂದ ಅನುಮತಿ ಪಡೆದುಕೊಂಡು ಒಳಗೆ ಹೋಗುವ ಕಾರ್ಯ ಮಾಡಿದ್ದಾರೆ.
ಖಾಸಗಿ ಜಾಗದ ಗೇಟ್ ಗೆ ಹಾಕಿದ್ದು ಬೀಗ ತೆಗೆಯಲು ಸದ್ರಿ ತೋಟವನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಬರಬೇಕಾಗಿ ಬಂತು. ಎಸ್.ಐಟಿ ಮೊದಲೇ ಮಾಹಿತಿ ನೀಡಿರದ ಕಾರಣ ತೋಟವನ್ನು ನೋಡಿಕೊಳ್ಳುವವರು ಸ್ಥಳದಲ್ಲಿ ಇರಲಿಲ್ಲ. ಇದರಿಂದಾಗಿ ಅವರು ಬರಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಸ್ಐಟಿ ಕಾಯಬೇಕಾಗಿ ಬಂತು.
ಬಳಿಕ ಗೇಟ್ ನ ಬೀಗದ ಕೀ ತರಿಸಿ ಗೇಟ್ ಅನ್ನು ತೆರೆದು ಎಸ್ಐಟಿ ಸ್ಥಳಕ್ಕೆ ತೆರಳಿದೆ.
ಸ್ಥಳ ಗುರುತಿಸುವ ವೇಳೆ ಇಲ್ಲಿಗೂ ಬಂದಿದ್ದ ದೂರುದಾರ
ಎಸ್ಐಟಿ ಆರಂಭದಲ್ಲಿ ಸಾಕ್ಷಿ ದೂರುದಾರನೊಂದಿಗೆ ಸ್ಥಳ ಗುರುತಿಸಲು ಬಂದ ವೇಳೆ ಈ ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಭಾರೀ ಮಳೆ ಮತ್ತು ಸಂಜೆಯಾದ ಕಾರಣ ಸ್ಥಳ ಗುರುತಿಸುವ ಕಾರ್ಯವನ್ನು ಮಾಡದೆ ಎಸ್ಐಟಿ ಹಿಂದಿರುಗಿತ್ತು. ಇದೀಗ ಇದೇ ಸ್ಥಳಕ್ಕೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನೊಂದಿಗೆ ಆಗಮಿಸಿದ್ದು ಇಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.