×
Ad

ಧರ್ಮಸ್ಥಳ ದೂರು| ಧರ್ಮಸ್ಥಳದಲ್ಲಿ ಯೂಟ್ಯೂಬರ್‌ ಗಳ ಮೇಲೆ ಮಾರಣಾಂತಿಕ ಹಲ್ಲೆ; ಇಬ್ಬರಿಗೆ ಗಂಭೀರ ಗಾಯ

ಹಲ್ಲೆಯ ಬೆನ್ನಲ್ಲೇ ಎರಡು ಗುಂಪುಗಳ ನಡುವೆ ಘರ್ಷಣೆ; ಬಿಗುವಿನ ವಾತಾವರಣ

Update: 2025-08-06 22:53 IST

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಮೃತದೇಹಗಳನ್ನು ಹೂತು ಹಾಕಿದ ಘಟನೆಗೆ ಸಂಬಂಧಿಸಿ ದಂತೆ ಧರ್ಮಸ್ಥಳ ಗ್ರಾಮದ ಪಾಂಗಳ ರಸ್ತೆಯ ಸಮೀಪ ಲೈವ್ ವರದಿ ಮಾಡುತ್ತಿದ್ದ ಕುಡ್ಲ ರ‍್ಯಾಂಪೇಜ್ ನ ಅಜಯ್ ಅಂಚನ್, ಯುನೈಟಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರ‍್ಯಾಂಪೇಜಿನ ಕ್ಯಾಮೆರಾ ಮೆನ್ ಮೇಲೆ ಬುಧವಾರ ಸಂಜೆಯ ವೇಳೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸುಮಾರು 25ಕ್ಕೂ ಹೆಚ್ಚು ಮಂದಿಯಿದ್ದ ತಂಡ ಇವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳೆಲ್ಲರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

►ಉಜಿರೆಯಲ್ಲಿ ʼಸುವರ್ಣ ಚಾನೆಲ್ʼ ತಂಡದ ಮೇಲೆ ಹಲ್ಲೆ

ಉಜಿರೆಯ ಖಾಸಗಿ ಆಸ್ಪತ್ರೆಯ ಬಳಿ ಸುವರ್ಣ ಚಾನೆಲ್ ನ ವರದಿಗಾರಾದ ಹರೀಶ್, ನವೀನ್ ಪೂಜಾರಿ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

►ಹಲ್ಲೆಯ ಬೆನ್ನಲ್ಲಿಯೇ ಘರ್ಷಣೆ

ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆಯ ಬೆನ್ನಲ್ಲಿಯೇ ಧರ್ಮಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು.

ಯುಟ್ಯೂಬರ್ ಗಳ ಮೇಲಿನ ಹಲ್ಲೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸೌಜನ್ಯ ಪರ ಹೋರಾಟಗಾರರು ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಹಲ್ಲೆಗೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿದ್ದಾರೆ. ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ನೇತ್ರಾವತಿ ಪಾಂಗಳ ರಸ್ತೆಯಲ್ಲಿ ಸೌಜನ್ಯ ಪರ ಹೋರಾಟಗಾರರು ಸೇರಿದ್ದು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಇಲ್ಲಿ ಜನ ಸೇರಿರುವ ಮಾಹಿತಿ ತಿಳಿದು ಧರ್ಮಸ್ಥಳದ ಪರವಾಗಿರುವವರು ನೂರಾರು ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದಾರೆ.

ನೇತ್ರಾವತಿ ಪಾಂಗಳ ರಸ್ತೆಯ ಬಳಿ ಎರಡೂ ಗುಂಪುಗಳು ಎದುರಾಗಿದ್ದು ಘರ್ಷಣೆಗೆ ಕಾರಣವಾಗಿದೆ. ಈ ವೇಳೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಸೌಜನ್ಯ ಪರ ಹೋರಾಟಗಾರರು ಧ್ವನಿಯೆತ್ತಿದರು. ಈ ವೇಳೆ ಧರ್ಮಸ್ಥಳದ ಪರವಾಗಿ ಬಂದ ಗುಂಪು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಈ ವೇಳೆ ಅಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದರೂ ಗುಂಪುಗಳನ್ನು ತಡೆಯಲಾಗಲಿಲ್ಲ. ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಘರ್ಷಣೆ ಬೆಳೆದಿತ್ತು.

ಧರ್ಮಸ್ಥಳ ಪರವಾಗಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಯುಟ್ಯೂಬರ್ ಗಳ ಪರವಾಗಿ ಸೇರಿದ್ದವರ ಮೇಲೆ ಮುಗಿ ಬಿದ್ದರು. ಈ ವೇಳೆ ಪೊಲೀಸರು ಸೌಜನ್ಯ ಹೋರಾಟಗಾರರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಅವರು ತೆರಳುವ ವೇಳೆ ಆಕ್ರೋಶಿತ ಗುಂಪು ಅವರನ್ನು ಬೆನ್ನಟ್ಟುವ ಪ್ರಯತ್ನಕ್ಕೂ ಮುಂದಾಯಿತು.

ಇದಾದ ಬಳಿಕ ಸ್ಥಳದಲ್ಲಿದ್ದ ಗುಂಪು ಅಲ್ಲಿಯೇ ನಿಂತು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮಟ್ಟಣ್ಣನವರ್ ವಿರುದ್ಧ ಆಕ್ರೋಶಿತ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂತು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಧರ್ಮಸ್ಥಳದ ವಿರುದ್ಧ ಅಪಮಾನಕಾರಿಯಾಗಿ ಮಾತನಾಡುತ್ತಿರುವವರ ವಿರುದ್ಧ ಕುಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದಾರೆ. ಅಲ್ಲಿದ್ದ ವಿಠಲ ಗೌಡರಿಗೆ ಸೇರಿದ ವಾಹನ ಹಾಗೂ ಇನ್ನೊಂದು ವಾಹನವನ್ನು ಸಂಪೂರ್ಣ ಜಖಂಗೊಳಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಸೇರಿದ್ದ ಜನರನ್ನು ಚದುರಿಸಿದರು. ಇದರ ಬೆನ್ನಲ್ಲಿಯೇ ನೂರಾರು ಸಂಖ್ಯೆಯಲ್ಲಿ ಜನರು ಧರ್ಮಸ್ಥಳ ಪೊಲೀಸ್‌ ಠಾಣೆಯ ಮುಂದೆ ಸೇರಿದ್ದು, ಕ್ಷೇತ್ರದ ವಿರುದ್ಧ ಅಪಮಾನ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುಂತೆ ಧರಣಿ ನಡೆಸಿದರು. ಎಸ್.ಪಿ ಸ್ಥಳಕ್ಕೆ ಅಗಮಿಸಿದ ಬಳಿಕ ಸೇರಿದ್ದ ಜನರು ಚದುರಿದ್ದಾರೆ.

►ಉಜಿರೆಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು; ಉದ್ವಿಗ್ನ ವಾತಾವರಣ

ಯುಟ್ಯೂಬರ್ ಗಳ ಮೇಲೆ ನಡೆದ ಹಲ್ಲೆಯ ಮಾಹಿತಿ ತಿಳಿದು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಹಲ್ಲೆಗೆ ಒಳಗಾದವರು ದಾಖಲಾಗಿದ್ದ ಆಸ್ಪತ್ರೆಯ ಎದುರು ಜನ ಜಮಾಯಿಸಿದರು. ಕೂಡಲೇ ಸ್ಥಳದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಜನರಿಗೆ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದ ಬಳಿಕವೂ ತಡರಾತ್ರಿಯೂ ಜನರು ಗುಂಪು ಸೇರುತ್ತಿರುವುದು ಕಂಡುಬಂತು. ಈ ನಡುವೆ ಚಾನೆಲ್ ವರದಿಗಾರರ ಮೇಲೆ ಹಲ್ಲೆ ಮಾಡುವ ಕಾರ್ಯವೂ ನಡೆದಿದೆ.

ಐಜಿಪಿ ಅಮಿತ್ ಸಿಂಗ್, ಎಸ್.ಪಿ ಡಾ. ಅರುಣ್ ಕೆ. ಎಎಸ್ಪಿ ರಾಜೇಂದ್ರ, ಬಂಟ್ವಾಳ ಡಿ ವೈ ಎಸ್.ಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News