×
Ad

ಧರ್ಮಸ್ಥಳ ದೂರು| ಎಸ್ ಐ ಟಿ ಯಿಂದ ದಯಮಾಡಿ ದಯಾಮ ಅವರನ್ನು ಕೈಬಿಡಿ; ಡಿಜಿ, ಐಜಿಪಿಗೆ ಪತ್ರ ಬರೆದ ವಕೀಲ ಸೂರ್ಯ ಮುಕುಂದರಾಜ್

“ಪ್ರೊಬೆಷನರಿ ಅಧಿಕಾರಿಯಾಗಿದ್ದಾಗ ವ್ಯಕ್ತಿಯೊಬ್ಬರಿಗೆ ಸುಳ್ಳು ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆ; ಇಲಾಖಾ ವಿಚಾರಣೆಗೆ ಆದೇಶಿಸಿದ್ದ ನ್ಯಾಯಾಲಯ”

Update: 2025-08-07 22:04 IST

ಬೆಂಗಳೂರು, ಆ.7: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದ ಸಂಬಂಧ ರಚಿಸಿರುವ ವಿಶೇಷ ತನಿಖಾ ತಂಡ(SIT)ದಿಂದ, ನ್ಯಾಯಾಲಯದಿಂದ ಇಲಾಖಾ ವಿಚಾರಣೆಗೆ ಆದೇಶಿಸಲ್ಪಟ್ಟ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಕೈಬಿಡಬೇಕು ಎಂದು ವಕೀಲ ಸೂರ್ಯ ಮುಕುಂದರಾಜ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ(ಡಿಜಿ, ಐಜಿಪಿ)ರಿಗೆ ಪತ್ರ ಬರೆದಿದ್ದಾರೆ.

►ಪತ್ರದಲ್ಲೇನಿದೆ?

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 11, 2020ರಂದು ಪತ್ತೆಯಾದ ಮಹಿಳೆಯ ಮೃತದೇಹವನ್ನು, ನಾಪತ್ತೆಯಾದ ಮಹಿಳೆ ಮಲ್ಲಿಗೆ ಅವರದ್ದು ಎಂಬ ಅನುಮಾನದ ಮೇರೆಗೆ, ಆಕೆಯ ಪತಿ ಸುರೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ತನ್ನ ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೇ 5, 2021 ರಂದು ಸುರೇಶ್ ಅವರನ್ನು ಬಂಧಿಸಲಾಗಿತ್ತು. ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದ ಬಳಿಕ ಪತ್ನಿ ಬದುಕಿರುವುದು ಸುರೇಶಗೆ ತಿಳಿದು, ಪತ್ನಿ ಬದುಕಿರುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಈ ಪ್ರಕರಣ ನಡೆದಾಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದ ಜಿತೇಂದ್ರ ಕುಮಾರ್ ದಯಾಮ ಅವರು ಬೆಟ್ಟದಪುರ ಪೊಲೀಸ್ ಠಾಣೆಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ಯುಡಿಆರ್ ಸಂಖ್ಯೆ: 33 / 2020 ಕಲಂ 174 (ಸಿ) ಸಿಆರ್ ಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಮೈಸೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಸಿ.ಸಿ. 3 6 9 6 /2022 ವಿಚಾರಣೆಯ ಸಂದರ್ಭದಲ್ಲಿ ಜಿತೇಂದ್ರ ಕುಮಾರ್ ದಯಾಮ ಅವರು ಬರೆದಿರುವ ಶವ ಪಂಚನಾಮೆಯ ಕುರಿತು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ವಿವರವಾಗಿ ನಮೂದಿಸಿದ್ದರು. ನ್ಯಾಯಾಲಯದಲ್ಲಿ ಯಾವ ಸಾಕ್ಷಿಗಳೂ ಕೂಡ ಪೊಲೀಸರು ಕಟ್ಟಿದ ಕಥೆಗೆ ಪೂರಕವಾಗಿ ಸಾಕ್ಷಿ ನುಡಿದಿರಲಿಲ್ಲ. ಸುರೇಶ, ತನ್ನ ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ್ದಾರೆ, ದೊರೆತ ಶವದ ಅವಶೇಷಗಳು ಮಲ್ಲಿಗೆಯದೆ ಎಂದು ಸಾಬೀತು ಮಾಡಲು ಪೊಲೀಸರು ನ್ಯಾಯಾಲಯದಲ್ಲಿ ವಿಫಲರಾಗಿದ್ದರು.

ಇದೇ ವೇಳೆ, ಸುರೇಶ ಅವರ ಪತ್ನಿ ಮಲ್ಲಿಗೆ ಮಡಿಕೇರಿಯಲ್ಲಿ ಪತ್ತೆಯಾಗಿದ್ದರು. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಕೊಲೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದ ಮಹಿಳೆಯು, ನ್ಯಾಯಾಲಯದ ಮುಂದೆ ತಾನು ಸತ್ತಿಲ್ಲ ಎಂದು ಸಾಕ್ಷಿ ನುಡಿದಿದ್ದರು. ಪೊಲೀಸರು ಮಾಡಿದ ಎಡವಟ್ಟಿಗೆ ಎರಡು ವರ್ಷಗಳ ಕಾಲ ಸುರೇಶ ಮಾಡದ ತಪ್ಪಿಗೆ ಜೈಲು ವಾಸ ಅನುಭವಿಸಬೇಕಾಗಿ ಬಂದಿತ್ತು ಎಂದು ವಕೀಲ ಮುಕುಂದರಾಜ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಲ್ಲಿಗೆ ಪತ್ತೆಯಾಗಿ ನ್ಯಾಯಾಧೀಶರ ಮುಂದೆ ಹಾಜರಾದ, ನಂತರ ಎಪ್ರಿಲ್ 23, 2025ದಂದು ಮೈಸೂರು ಜಿಲ್ಲಾ ಐದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶರು ಸುರೇಶ ಅವರನ್ನು ಖುಲಾಸೆ ಮಾಡಿ ತೀರ್ಪು ನೀಡಿದ್ದು, ತಮ್ಮ ತೀರ್ಪಿನಲ್ಲಿ ಪ್ರಕರಣದ 52ನೇ ಸಾಕ್ಷಿಯಾಗಿದ್ದ ಜಿತೇಂದ್ರ ಕುಮಾರ್ ದಯಾಮ ಹಾಗೂ ಪ್ರಕರಣದ ತನಿಖೆ ನಡೆಸಿದ 53ನೇ ಸಾಕ್ಷಿ ಪ್ರಕಾಶ್ ಎಂ ಎತ್ತಿನ ಮನಿ, 54ನೇ ಸಾಕ್ಷಿ ಮಹೇಶ್ ಪಿಕೆ, 55ನೇ ಸಾಕ್ಷಿ ಪ್ರಕಾಶ್ ಬಿಜಿ ವಿರುದ್ಧ ಇಲಾಖೆ ಕ್ರಮ ಕೈಗೊಂಡು ವರದಿ ನೀಡುವಂತೆ ತೀರ್ಪು ನೀಡಿತ್ತು.

ನಿರ್ದೋಷಿಯಾದ ಸುರೇಶ್ ಗೆ ನ್ಯಾಯಾಲಯ ಒಂದು ಲಕ್ಷ ಪರಿಹಾರ ನೀಡುವಂತೆ ಆದೇಶಸಿತ್ತು. ಪರಿಹಾರದ ಹಣವನ್ನು 5 ಕೋಟಿ ರೂ.ಗೆ ಹೆಚ್ಚಿಸುವಂತೆ ಹಾಗೂ ಈ ಪ್ರಕರಣದ ಎಲ್ಲಾ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿ ತನ್ನ ವಕೀಲರಾದ ಪಾಂಡು ಪೂಜಾರಿ ಅವರ ಮೂಲಕ ಹೈಕೋರ್ಟಿನಲ್ಲಿ ಸುರೇಶ್ ಮೇಲ್ಮನವಿಯನ್ನು ಸಲ್ಲಿಸಿದ್ದರು. ತೀರ್ಪಿನ ಪ್ರತಿಯನ್ನು ಡಿಜಿ, ಐಜಿಪಿಯವರ ಕಚೇರಿಗೆ, ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ, ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗಳ ಕಚೇರಿಗೆ ನ್ಯಾಯಾಲಯದ ಮೂಲಕ ಕಳಿಸಲಾಗಿತ್ತು ಎಂದು ಮುಕುಂದ್ ರಾಜ್ ತಿಳಿಸಿದ್ದಾರೆ.

ಈ ಮಾಹಿತಿ ತಿಳಿದಿದ್ದರೂ ರಾಜ್ಯದ ಅತ್ಯಂತ ಪ್ರಮುಖ ಪ್ರಕರಣವಾದ, ಧರ್ಮಸ್ಥಳ ಶವ ಕೂತಿಟ್ಟಿರುವ ಪ್ರಕರಣದ ಕುರಿತು ರಚಿಸಲಾದ ವಿಶೇಷ ತನಿಖಾ ತಂಡದಲ್ಲಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದು ತನಿಖೆಯ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ. ನ್ಯಾಯಾಲಯದಿಂದ ಇಲಾಖಾ ವಿಚಾರಣೆಗೆ ಆದೇಶಿಸಲ್ಪಟ್ಟ ಇಂತಹ ಅಧಿಕಾರಿಯನ್ನು ವಿಶೇಷ ತನಿಖಾ ತಂಡದಲ್ಲಿ ಮುಂದುವರಿಸುವುದು ಸೂಕ್ತವಲ್ಲ. ಆದ್ದರಿಂದ ದಯಮಾಡಿ ತಾವು ಜಿತೇಂದ್ರ ಕುಮಾರ್ ದಯಾಮ ಅವರನ್ನು ತನಿಖಾ ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ವಕೀಲ ಮುಕುಂದರಾಜ್ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News