×
Ad

ಧರ್ಮಸ್ಥಳ ದೂರು: ಬೆಳ್ತಂಗಡಿಯಿಂದಲೇ ಎಸ್ಐಟಿ ಕಾರ್ಯನಿರ್ವಹಣೆ?

Update: 2025-07-25 11:13 IST

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರಕಾರ ನಿಯೋಜಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬೆಳ್ತಂಗಡಿಯನ್ನು ಕೇಂದ್ರವಾಗಿಸಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪವೇ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹವನ್ನೇ ಎಸ್ಐಟಿ ಕೇಂದ್ರವಾಗಿ ಮಾಡಲಾಗುತ್ತಿದೆ. ಇಂದೇ(ಜು.25) ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿ ಆರಂಭವಾಗಲಿದೆ ತಿಳಿದು ಬಂದಿದೆ.

ನೂತನವಾಗಿ ನಿರ್ಮಾಣಗೊಂಡಿರುವ ಇಲ್ಲಿನ ಪೊಲೀಸ್ ವಸತಿಗೃಹಗಳ ಉದ್ಘಾಟನೆ ಇನ್ನೂ ನಡೆದಿಲ್ಲ. ಇಲ್ಲಿ ಎಸ್ಐಟಿ ತಂಡ ಕಾರ್ಯ ನಿರ್ವಹಿಸಲು ಅಗತ್ಯವಿರುವಷ್ಟು ಸ್ಥಳಾವಕಾಶವಿದೆ. ಪೊಲೀಸ್ ಠಾಣೆಯ ಆವರಣದ ಒಳಗೆಯೇ ಈ ಕಟ್ಟಡ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ತನಿಖೆ ವಿಚಾರಣೆಗಳ ದೃಷ್ಟಿಯಿಂದ ವಿಶೇಷ ತನಿಖಾ ತಂಡಕ್ಕೆ ಇದು ಸೂಕ್ತ ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಂಗಳೂರಿನಲ್ಲಿ ಎಸ್ಐಟಿ ಕಚೇರಿ ಸಿಧ್ಧಪಡಿಸಿದರೂ ಧರ್ಮಸ್ಥಳದಿಂದ ಅಲ್ಲಿಗೆ 75 ಕಿ.ಮೀ. ದೂರವಿರುವುದು ತನಿಖಾ ದೃಷ್ಟಿಯಿಂದ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬೆಳ್ತಂಗಡಿಯಲ್ಲೇ ಕೇಂದ್ರಸ್ಥಾನವಾಗಿಸಿ ತನಿಖೆ ಆರಂಭಿಸಲು ಎಸ್ಐಟಿ ಮುಂದಾಗಿರುವುದಾಗಿ ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ತನಿಖೆಗೆ ರಾಜ್ಯ ಸರಕಾರವು ಜು.20ರಂದು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿದೆ. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ.

ಈ ತನಿಖಾ ತಂಡಕ್ಕೆ ಹೆಚ್ಚುವರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News