×
Ad

ಧರ್ಮಸ್ಥಳ | ಆನೆ ಮಾವುತ ಮತ್ತು ಸಹೋದರಿಯ ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಎಸ್ಐಟಿಗೆ ದೂರು

13 ವರ್ಷಗಳ ಹಿಂದೆ ನಡೆದ ಪ್ರಕರಣ

Update: 2025-08-18 16:01 IST

ದೂರು ಸ್ವೀಕರಿಸಿದ ಎಸ್ಐಟಿ ನೀಡಿರುವ ಹಿಂಬರಹ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ 2012ರಲ್ಲಿ ನಡೆದ ಆನೆ ಮಾವುತ ನಾರಾಯಣ ಸಫಲ್ಯ ಮತ್ತು ಅವರ ಸಹೋದರಿ ಯುಮುನಾ ಎಂಬವರ ಭೀಕರ ಹತ್ಯೆಯ ಬಗ್ಗೆ ತನಿಖೆಗೆ ಒತ್ತಾಯಿಸಿ ಮೃತರ ಕುಟುಂಬಸ್ಥರು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ದೂರು ನೀಡಿದ್ದಾರೆ.

ಕೊಲೆಯಾದ ನಾರಾಯಣರ ಮಕ್ಕಳಾದ ಗಣೇಶ ಮತ್ತು ಭಾರತಿ ಇಂದು(ಸೋಮವಾರ) ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ಆನೆ ಮಾವುತನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ ನಮ್ಮ ತಂದೆ ನಾರಾಯಣ ಸಫಲ್ಯ ಮತ್ತು ಅತ್ತೆ ಯಮುನಾರನ್ನು 2012ರ ಸೆಪ್ಟಂಬರ್ 21ರಂದು ಬೂರ್ಜೆಯಲ್ಲಿರುವ ಮನೆಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಅವಳಿ ಕೊಲೆಯ ಬಗ್ಗೆ 2013ರ ನವೆಂಬರ್ 5ರಂದು ಅಂದಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನ ಸಿಕ್ಕಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಹಿಂದೆ ಎಸ್ಪಿಗೆ ಸಲ್ಲಿಸಿದ್ದ ದೂರಿನ ಪ್ರತಿಯನ್ನೂ ಲಗತ್ತಿಸಲಾಗಿದೆ.

ಈ ಬಗ್ಗೆ ದೂರು ಸ್ವೀಕರಿಸಿರುವ ಎಸ್ಐಟಿ ಅಧಿಕಾರಿಗಳು, ತಾವು ನೀಡಿದ ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸಿರುತ್ತೇವೆ. ಅಪರಾಧ ಕೃತ್ಯದ ಕುರಿತು ಮಾಹಿತಿಯನ್ನು/ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂದಿನ ಕ್ರಮ ಜರುಗಿಸುವ ಕುರಿತು ಸಲ್ಲಿಸಲಾಗುವುದು ಎಂದು ಹಿಂಬರಹ ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ನಮ್ಮ ತಂದೆ ನಾರಾಯಣ ಅವರ ಹಿರಿಯರ ಕಾಲದಿಂದಲೂ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿರುವ ತನ್ನ ಮನೆಯಲ್ಲಿ ತನ್ನ ಸಹೋದರಿ ಯಮುನಾ ಎಂಬವರೊಂದಿಗೆ ವಾಸ ಮಾಡಿಕೊಂಡಿದ್ದರು. ನಮ್ಮ ತಂದೆ ವಾಸ ಮಾಡಿಕೊಂಡಿದ್ದ ಮನೆಯನ್ನು ತೆರವುಗೊಳಿಸುವಂತೆ ವೀರೇಂದ್ರ ಹೆಗ್ಗಡೆಯವರ ತಮ್ಮ ಹರ್ಷೇಂದ್ರ ಕುಮಾರ್ ಸುಮಾರು ಐದು ವರ್ಷಗಳಿಂದ ತಂದೆಗೆ ಜೀವ ಬೆದರಿಕೆ ಹಾಕುತ್ತಿದ್ದರು. ನಮ್ಮ ತಂದೆಯ ಮೇಲೆ ಅವರ ಮನೆಯ ಅಂಗಳದಲ್ಲೇ ಎರಡು ಸಲ ಹಲ್ಲೆ ಕೂಡಾ ಮಾಡಿರುತ್ತಾರೆ. ದಿನಾಂಕ 20-09-2012ರಂದು ಸಂಜೆ ಹರ್ಷೇಂದ್ರ ಕುಮಾರ್ ನಮ್ಮ ತಂದೆ ವಾಸವಿದ್ದ ಮನೆಗೆ ಭೇಟಿ ನೀಡಿ ಮನೆಯನ್ನು ಕೂಡಲೇ ತೆರವುಗೊಳಿಸುವಂತೆಯೂ, ತಪ್ಪಿದಲ್ಲಿ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು.

ದಿನಾಂಕ 21.09.2012ರಂದು ರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವದ ಪ್ರಯುಕ್ತ ಆಯೋಜಿಸಿದ್ದ ನಾಟಕ ವೀಕ್ಷಣೆಗೆ ತೆರಳಿದ್ದ ನಮ್ಮ ತಂದೆ ಮತ್ತು ಅತ್ತೆ ಯಮುನಾ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಗೆ ಬಂದಿರುತ್ತಾರೆ ಎಂಬ ಮಾಹಿತಿ ಇದೆ. ಮಾರನೇ ದಿನ ಮಧ್ಯಾಹ್ನ 12 ಗಂಟೆಯ ಸಮಯವಾದರೂ ಮನೆಯ ಬಾಗಿಲು ತೆರೆಯದಿರುವುದನ್ನು ಅರಿತ ಸ್ಥಳೀಯರು ಗಮನಿಸಿದಾಗ ನಮ್ಮ ತಂದೆಯ ತಲೆಗೆ ಸೈಝ್ ಕಲ್ಲು ಮತ್ತು ನಮ್ಮ ಅತ್ತೆ ಯಮುನಾರ ತಲೆಗೆ ರುಬ್ಬುವ ಕಲ್ಲನ್ನು ಹೊತ್ತು ಹಾಕಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು.

ನಮ್ಮ ತಂದೆಯ ಬಳಿ ಯಾವುದೇ ಸಂಪತ್ತು, ಹಣ ಆಭರಣಗಳು ಇದ್ದಿರಲಿಲ್ಲ ಮತ್ತು ಇದ್ದಂತಹ ಅಲ್ಪಸ್ವಲ್ಪ ಹಣ ಮತ್ತು ಆಭರಣಗಳನ್ನು ಸಹ ಕೊಲೆಗಟುಕರು ದೋಚಿರುವುದಿಲ್ಲ. ನಮ್ಮ ತಂದೆಗೆ ಯಾರೂ ವಿರೋಧಿಗಳಿರಲಿಲ್ಲ. ಪೂರ್ವಜರಿಂದ ನಮ್ಮ ತಂದೆ ವಾಸವಾಗಿದ್ದ ಮನೆ ಮತ್ತು ಅಡಿ ಸ್ಥಳವನ್ನು ಸ್ವಾಧೀನ ಪಡಿಸುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ.

ಈ ವಿಷಯವನ್ನು ಮೂರು ದಿನಗಳ ನಂತರ ವೀರೇಂದ್ರ ಹೆಗ್ಗಡೆಯವರನ್ನು ಖುದ್ದು ಬೇಟಿಯಾಗಿ ತಿಳಿಸಿದಾಗ "ಆಗುವುದು ಆಗಿ ಹೋಯ್ತು, ಆ ವಿಷಯವನ್ನು ಬಿಟ್ಟು ಬಿಡಿ" ಎಂದು ತಿಳಿಸಿರುತ್ತಾರೆ. ನಮ್ಮ ತಂದೆಯ ಮನೆಗೆ ಹರ್ಷೇಂದ್ರ ಕುಮಾರ್ ರವರು ಬೀಗ ಜಡಿದು ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ನಮಗೆ ತರಲು ಬಿಟ್ಟಿರುವುದಿಲ್ಲ ಮತ್ತು ಮನೆಗೆ ಪ್ರವೇಶಿಸದಂತೆ ಬೆದರಿಸಿರುತ್ತಾರೆ.

ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಅಂದಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ನಮ್ಮ ದೂರಿಗೆ ಸೂಕ್ತ ಸ್ಪಂದನ ಸಿಕ್ಕಿರುವುದಿಲ್ಲ.

ನಮ್ಮ ತಂದೆ ಮತ್ತು ಅತ್ತೆಯ ಕೊಲೆಯ ಪ್ರಕರಣವನ್ನು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News