×
Ad

ಧರ್ಮಸ್ಥಳ ದೂರು| ಕಳೇಬರ ಶೋಧಕ್ಕೆ GPR ಬಳಸಿ; ಮತ್ತೆ ಒತ್ತಾಯಿಸಿದ ಸುಜಾತ ಭಟ್ ಪರ ವಕೀಲರು

Update: 2025-08-10 18:02 IST

ಬೆಂಗಳೂರು, ಆ.10: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಕಾರ್ಯಾಚರಣೆಯಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಉಪಕರಣ ಬಳಸಿ ಎಂದು, 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿರುವ ಮಂಜುನಾಥ್ ಎನ್, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕಳೇಬರ ಶೋಧ ಕಾರ್ಯಾಚರಣೆಯಲ್ಲಿ ದೂರುದಾರ ಭೀಮ ಸೂಚಿಸಿದ ಸ್ಥಳಗಳಲ್ಲಿ ಉತ್ಖನನ ನಡೆಸಿದರೂ, ಅಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆದರೆ ಅಗೆತ ನಡೆದ ಸ್ಥಳದಿಂದ ಕೇವಲ ಒಂದು ಅಡಿ ದೂರ ಅಥವಾ ಆಳದಲ್ಲಿ ಕಳೇಬರಗಳಿಲ್ಲವೆಂದು ಖಚಿತಪಡಿಸಲು ಯಾರಿಗೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಉಪಕರಣದ ಬಳಕೆಯನ್ನು ಆರಂಭಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಭ್ಯವಾದ ಮಾಹಿತಿಯ ಪ್ರಕಾರ, ಎರಡು ದಿನಗಳ ಕಾಲ GPR ಉಪಕರಣವನ್ನು ಬಳಸಲು ಸುಮಾರು 18 ಲಕ್ಷ ರೂ.ಗಳ ವೆಚ್ಚವಾಗಲಿದೆ. ಕರ್ನಾಟಕ ರಾಜ್ಯ ಸರಕಾರದ ವಾರ್ಷಿಕ ವರಮಾನವು 2,50,000 ಕೋಟಿ ರೂ.ಗಳನ್ನು ಮೀರಿದೆ. ಅಗತ್ಯವೆಸಿದಾಗ ವಿವಿಧ ರಾಜಕೀಯ ಪಕ್ಷಗಳ ಆಡಳಿತಾವಧಿಯಲ್ಲಿ ನುರಿತ ಸುಪ್ರೀಂ ಕೋರ್ಟ್ ವಕೀಲರ ಸೇವೆಯನ್ನು ಪಡೆದುಕೊಳ್ಳಲು ದಿನಕ್ಕೆ ಸರಾಸರಿ 15 ಲಕ್ಷ ರೂ.ಗಳಷ್ಟು ಶುಲ್ಕವನ್ನು ಸರ್ಕಾರ ಭರಿಸಿದೆ. ಹೀಗಿರುವಾಗ GPR ಬಳಕೆಗೆ ತಡ ಮಾಡುವುದು ಸೂಕ್ತವಲ್ಲ ಎಂದು ವಕೀಲ ಮಂಜುನಾಥ್ ಎನ್ ತಿಳಿಸಿದ್ದಾರೆ.

ಭೀಮ ನೀಡಿರುವ ಮಾಹಿತಿಯ ವಿಶ್ವಾಸಾರ್ಹತೆಯ ಪ್ರಶ್ನೆ ಎತ್ತುವವರು, ದಿನದಿಂದ ದಿನಕ್ಕೆ SIT ತನಿಖೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು, ಆತ ನೀಡಿದ ಹೇಳಿಕೆಗಳ ಪ್ರಾಮಾಣಿಕತೆಯ ಸೂಚಕವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನೆಲ್ಲ ಪರಿಗಣಿಸಿದರೆ, SIT ಈಗಾಗಲೇ ಮೆರೆದಿರುವ ಕಾರ್ಯಕ್ಷಮತೆಯನ್ನು ಮುಂದುವರೆಸಿ, ಧರ್ಮಸ್ಥಳದಲ್ಲಿ ಹೂತುಹಾಕಿರುವ ಶವಗಳು ಹಾಗೂ ಅವುಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಶೀಘ್ರವೇ ಬಹಿರಂಗಪಡಿಸುವುದು ಅನಿವಾರ್ಯವಾಗಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ದೂರುದಾರ ಭೀಮ ನಿಜಕ್ಕೂ ಮುಂದಿರುವ ಎಲ್ಲಾ ಸ್ಥಳಗಳಲ್ಲಿ ವಿಫಲನಾಗುತ್ತಾನೆಂಬ ವಿಶ್ವಾಸವಿರುವವರು SIT ತನಿಖೆಯನ್ನು ವಿರೋಧಿಸಲು ಮುಂದಾಗುತ್ತಿರಲಿಲ್ಲ. ಆದರೆ, ದಿನದಿಂದ ದಿನಕ್ಕೆ ಭೀಮನ ಕಾರ್ಯಾಚರಣೆಗೆ ಕೆಲವು ಹಿತಾಸಕ್ತಿಗಳು ತಮ್ಮ ವಿರೋಧವನ್ನು ತೀವುಗೊಳಿಸುತ್ತಿರುವುದನ್ನು ನೋಡಿದಾಗ, ಆತನು ಸತ್ಯವನ್ನೇ ಹೇಳುತ್ತಿದ್ದಾನೆಂಬ ನಂಬಿಕೆಯು ಬಲವಾಗುತ್ತಿದೆ. ಇದಲ್ಲದೆ, ಧರ್ಮಸ್ಥಳದ ವಿವಿಧೆಡೆ ಶವಗಳನ್ನು ಹೂತುಹಾಕಿರು ವುದನ್ನು ನೇರವಾಗಿ ಕಂಡಿದ್ದಾಗಿ ಹಲವು ಗ್ರಾಮಸ್ಥರು ಈಗಾಗಲೇ SIT ಮುಂದೆ ಬಂದಿದ್ದಾರೆ. ಅವರನ್ನು ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳುವಲ್ಲಿ ವಿಳಂಬ ಸರಿಯಲ್ಲ ಎಂದು ವಕೀಲರು ಹೇಳಿದ್ದಾರೆ.

ಒಟ್ಟಿನಲ್ಲಿ, ಶ್ಲಾಘನೀಯ ಕಾರ್ಯಕ್ಷಮತೆಯನ್ನು ಮೆರೆದಿರುವ SIT ಯು ಧರ್ಮಸ್ಥಳದಲ್ಲಿ ಹೂತುಹೋಗಿರುವ ದೇಹಗಳು ಮತ್ತು ಅವುಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಬಯಲಿಗೆಳೆದೆ ತೀರುತ್ತದೆ ಎಂಬ ವಿಶ್ವಾಸವಿದೆ ಎಂದು ವಕೀಲ ಮಂಜುನಾಥ್ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News