×
Ad

ಧರ್ಮಸ್ಥಳ ದೂರು | ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಧರ್ಮಸ್ಥಳಕ್ಕೆ ಭೇಟಿ, ದಾಖಲೆ ಪರಿಶೀಲನೆ

ʼಸುಮೋಟೋ ದೂರು ದಾಖಲಿಸಿಕೊಂಡು ತನಿಖೆʼ

Update: 2025-08-12 13:18 IST

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗೆ ಮತ್ತೊಂದು ತಿರುವು ಸಿಕ್ಕಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ನಾಲ್ವರು ಸದಸ್ಯರ ತಂಡವು ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿತು ಎಂದು ವರದಿಯಾಗಿದೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಯುವರಾಜ್ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ರವಿ ಸಿಂಗ್ ಅವರ ನೇತೃತ್ವದ ತಂಡವು ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡದ (SIT) ಕಚೇರಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು. ದೂರುದಾರ ಸಾಕ್ಷಿಯ ಹೇಳಿಕೆ ಸೇರಿದಂತೆ, ಹಲವು ಪ್ರಮುಖ ಮಾಹಿತಿಗಳನ್ನು ತಂಡ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ತಂಡದ ಮುಖ್ಯಸ್ಥ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯುವರಾಜ್ ಅವರು ಕಳೆದ ದಶಕದಲ್ಲಿ ದಾಖಲಾಗಿರುವ ಅಸಹಜ ಸಾವಿನ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಪಡೆದರು. ಇದೇ ಅವಧಿಯಲ್ಲಿ ಹೂಳಲಾದ, ಗುರುತಿಸಲಾಗದ ಶವಗಳ ಕುರಿತು ಮಾಹಿತಿಗಾಗಿ ಅಧಿಕಾರಿಗಳು ಗ್ರಾಮ ಪಂಚಾಯತ್ ಕಚೇರಿಗೂ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದರು. ಅಂತ್ಯಕ್ರಿಯೆಗಳನ್ನು ಮಾಡುತ್ತಿದ್ದ ಕಾರ್ಮಿಕರ ಪಟ್ಟಿ, ಅವರ ಬದುಕಿದ್ದಾರೆಯೇ ಎಂದು ಮಾಹಿತಿ ಸಂಗ್ರಹಿಸಿತು. ಅವರ ಹೇಳಿಕೆಗಳನ್ನು ಸಂಗ್ರಹಿಸಲು ತಂಡವು ಅವರ ನಿವಾಸಗಳಿಗೆ ಭೇಟಿ ನೀಡಿತು. ಪ್ರಸ್ತುತ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೈರ್ಮಲ್ಯ ಕಾರ್ಮಿಕರನ್ನೂ ಪಂಚಾಯತ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಯಿತು.

ಆಗಸ್ಟ್ 9ರಂದು ಎಸ್‌ಐಟಿ ತಂಡವು ಕಾರ್ಯಾಚರಣೆ ಮಾಡಿದ್ದ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಸಮೀಪದ ಸ್ಥಳವನ್ನು ಎನ್‌ಎಚ್‌ಆರ್‌ಸಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

“ಈ ಪ್ರಕರಣದ ಕುರಿತು ಯಾವುದೇ ಅಧಿಕೃತ ದೂರು ನಮಗೆ ಬಂದಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿ ನಾವು ಪರಿಶೀಲನೆ ಹಾಗೂ ತನಿಖೆ ಕೈಗೊಂಡಿದ್ದೇವೆ,” ಎಂದು ಎನ್‌ಎಚ್‌ಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.

“ಗುರುತಿಸಲಾಗದ ಶವಗಳ ವಿಲೇವಾರಿ ಪ್ರಕ್ರಿಯೆ ನಿಯಮಾನುಸಾರ ನಡೆದಿತ್ತೇ, ಯಾವುದೇ ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ದೂರುದಾರ, ಅವರ ವಕೀಲರು, ಬೆಂಬಲಿಗರು ಹಾಗೂ ತನಿಖೆಯನ್ನು ವಿರೋಧಿಸುವವರ ಹೇಳಿಕೆಗಳನ್ನು ಸಹ ದಾಖಲಿಸಲಾಗುತ್ತದೆ. ಎಸ್‌ಐಟಿ ತನಿಖೆಯ ಪ್ರಗತಿಯನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಲಾಗುವುದು. ಪ್ರಾಥಮಿಕವಾಗಿ ನಾಲ್ಕು ದಿನಗಳ ಕಾಲ ಇಲ್ಲಿ ತಂಗುವ ಯೋಜನೆ ಇದೆ, ಅಗತ್ಯವಿದ್ದರೆ ಈ ಅವಧಿ ವಿಸ್ತರಿಸಲಾಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News