ಧರ್ಮಸ್ಥಳ | ಬೋಳಿಯಾರು ರಸ್ತೆ ಬದಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ
Update: 2025-08-09 11:59 IST
ಧರ್ಮಸ್ಥಳ: ಇಲ್ಲಿಯ ಬೋಳಿಯಾರು ಎಂಬಲ್ಲಿ ಎರಡು-ಮೂರು ವಾರದಿಂದ ಬೀಡುಬಿಟ್ಟಿರುವ ಕಾಡಾನೆಯು ಇಂದು(ಆ.9) ಬೆಳಗ್ಗೆ ಮತ್ತೆ ರಸ್ತೆಯ ಬದಿಯಲ್ಲಿ ಪ್ರತ್ಯಕ್ಷವಾಗಿದೆ.
ಶಾಲಾ ಮಕ್ಕಳು ಬಸ್ಸಿಗೆ ಕಾಯುತ್ತಿರುವ ವೇಳೆ ಕಾಡಾನೆ ಕಾಣಿಸಿಕೊಂಡಿದ್ದು, ಯಾವುದೇ ತೊಂದರೆ ಮಾಡದೆ ಬೋಳಿಯಾರ್ ನಿಂದ ಅರಣ್ಯದೊಳಗೆ ಹೋಗಿದೆ.
ರಾತ್ರಿ ಹೊತ್ತು ಕಾಣಿಸುತ್ತಿದ್ದ ಕಾಡಾನೆಗಳು ಕೆಲ ದಿನಗಳಿಂದ ಬೋಳಿಯಾರು ಪರಿಸರದಲ್ಲಿ ಹಗಲು ಹೊತ್ತಿನಲ್ಲೇ ಓಡಾಡುತ್ತಿರುವುದು ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.
ವಾರದ ಹಿಂದೆ ಇಲ್ಲಿ ಕಾಣಿಸಿಕೊಂಡ ಕಾಡಾನೆ ಶಾಲೆಗೆ ಹೋಗಲು ಬಸ್ ಕಾಯುತ್ತಿದ್ದ ಮಕ್ಕಳತ್ತ ನುಗ್ಗಿತ್ತು. ಮಕ್ಕಳು ಓಡಿ ತಪ್ಪಿಸಿಕೊಂಡಿದ್ದರು. ಇದೀಗ ಇಲ್ಲಿರುವ ಕಾಡಾನೆಗಳನ್ನು ದಟ್ಟ ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.